

ಮೈಸೂರು: ಬೆಳಕಿನ ಹಬ್ಬ ದೀಪಾವಳಿಗಾಗಿ ಮನೆ ಮನೆಯಲ್ಲೂ ಹಬ್ಬದ ಸಿದ್ಧತೆ ಜೋರಾಗಿ ನಡೆದಿದೆ. ಸೋಮವಾರ ನರಕ ಚತುರ್ಥಿ ಆಚರಿಸಿರುವ ಜನರು ಧನಲಕ್ಷ್ಮೀ ಪೂಜೆ ಹಾಗೂ ಬಲಿ ಪಾಡ್ಯಮಿ ಆಚರಣೆಗೆ ಸಜ್ಜಾಗಿದ್ದಾರೆ.
ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಸೋಮವಾರ ಎಲ್ಲೆಡೆ ಖರೀದಿಯ ಭರಾಟೆ ಕಂಡು ಬಂತು. ಮಕ್ಕಳ ನೋಟ ಪಟಾಕಿಯತ್ತಲೇ ಕೇಂದ್ರೀಕರಣಗೊಂಡಿದ್ದರೆ, ಮಹಿಳೆಯರು ಮತ್ತು ಹಿರಿಯರು ಹಬ್ಬದ ತಯಾರಿಯಲ್ಲಿ ಮಗ್ನರಾಗಿದ್ದರು.
ದಿನಸಿ, ಪಟಾಕಿ, ಹಣತೆ ಸೇರಿದಂತೆ ಎಲ್ಲ ರೀತಿಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸಾರ್ವಜನಿಕರು ತಮ್ಮ ಆರ್ಥಿಕ ಇತಿಮಿತಿಯಲ್ಲಿಯೇ ಹಬ್ಬ ಆಚರಣೆಗೆ ಅಣಿಯಾಗುತ್ತಿದ್ದಾರೆ. ಈ ನಡುವೆಯೇ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಲು ನಗರದ ವಿವಿಧ ಮಾರುಕಟ್ಟೆಗೆ ಮುಗ್ಗಿಬಿದ್ದರು. ಬೆಳಗ್ಗೆಯಿಂದಲೇ ಗ್ರಾಹಕರು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟು ವಸ್ತುಗಳನ್ನು ಖರೀದಿಸಿದರು. ಸಂಜೆ ವೇಳೆಗೆ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು.ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಭರ್ಜರಿ ವ್ಯಾಪಾರ ನಡೆಯಿತು.