

ಮೈಸೂರು: ಶಾಂತಿ, ಪ್ರೀತಿ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ ಸಡಗರದಿಂದ ಆಚರಿಸಲಾಯಿತು.
ಚಳಿಯಲ್ಲೂ ಕ್ರೈಸ್ತ ಸಮುದಾಯದವರು ರಾತ್ರಿಯೇ ಚರ್ಚ್‌ಗಳಿಗೆ ತೆರಳಿ ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ದೀಪಾಲಂಕಾರದಿಂದ ಕಂಗೊಳಿಸಿತು. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು, ಸಾರ್ವಜನಿಕರು, ಅನ್ಯ ಧರ್ಮೀಯರು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಸಾಂತಾಕ್ಲಾಸ್ ವೇಷಧಾರಿಗಳು ಮಕ್ಕಳೊಂದಿಗೆ ಕುಣಿದು ಸಂಭ್ರಮಿಸಿದರು.
ಶನಿವಾರ ರಾತ್ರಿ 10.30ರ ಸುಮಾರಿಗೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಚರ್ಚ್‌ನ ಪರಿವಾರದೊಂದಿಗೆ ಛತ್ರಿ, ಚಾಮರಗಳ ಹಿಮ್ಮೇಳದೊಂದಿಗೆ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ಬಲಿಪೂಜೆ ಸಲ್ಲಿಸಿದರು. ಬಳಿಕ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಏಸುವಿನ ಜನನ, ಬಾಲ್ಯ, ಬದುಕನ್ನು ತಿಳಿಸುವ ಚಿತ್ರಣ ಸಾರಲಾಯಿತು. ಸಮುದಾಯದವರು ಏಸು ಗೀತೆಗಳನ್ನು ಹಾಡಿದರು.
ಚರ್ಚ್‌ಗಳ ಜತೆಗೆ ಮನೆಗಳನ್ನು ಸಿಂಗರಿಸಿದ್ದರು. ಹೊಸ ಉಡುಪುಗಳನ್ನು ಧರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಏಸು ದನದ ಕೊಟ್ಟಿಗೆಯಲ್ಲಿ ಜನಿಸಿದ್ದು ಎಂಬ ನಂಬಿಕೆಯೊಂದಿಗೆ ಮನೆಗಳಲ್ಲೂ ಕೊಟ್ಟಿಗೆ ಮಾದರಿ ನಿರ್ಮಿಸಿ ಗೋದಲಿಯಲ್ಲಿ ಬಾಲ ಯೇಸುವಿನ ಮೂರ್ತಿಯನ್ನಿಟ್ಟು ಸ್ಮರಿಸಿದರು. ವಿಶೇಷ ಖಾದ್ಯ ತಯಾರಿಸಿ ಸವಿದರು. ಬಗೆ ಬಗೆಯ ಕೇಕ್‌ಗಳನ್ನು ತಯಾರಿಸಿ ಹಂಚಿದರು.
ನಗರದ ಎಲ್ಲ ಕ್ರೆಸ್ತ ದೇವಾಲಯಗಳಲ್ಲಿ ಭಕ್ತಿಭಾವದಿಂದ ಯೇಸು ಕ್ರಿಸ್ತರ ಸ್ಮರಣೆ ಮಾಡಲಾಯಿತು. ಸಂತ ಬಾರ್ಥಲೋಮಿಯೊ ಚರ್ಚ್, ಹಿನಕಲ್‌ನ ಇನ್ಫೆಂಟ್ ಜೀಸಸ್ ಚರ್ಚ್, ಲಕ್ಷ್ಮೀಪುರಂನ ಹಾರ್ಡ್ವಿಕ್ ಚರ್ಚ್, ಬೆಂಗಳೂರು-ಮೈಸೂರು ರಸ್ತೆಯ ವೆಸ್ಲಿ ಚರ್ಚ್, ಗಾಂಧಿನಗರದ ಚರ್ಚ್, ರಾಮಕೃಷ್ಣ ನಗರದಲ್ಲಿರುವ ಏಸು ಕೃಪಾಲಯ, ಸಂತ ಫಿಲೋಮಿನಾ, ಸೆಂಟ್ ಜೋಸೆಫ್ ಚರ್ಚ್‌ಗಳಲ್ಲಿ ಹಬ್ಬದ ಸಡಗರ ಹೆಚ್ಚಿತು