

ಮಮದಾಪುರ : ಗೋಕಾಕ ತಾಲೂಕಿನ ಕೇಶಪ್ಪನಹಟ್ಟಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಭ್ರಮದ ಮಹಾರಥೋತ್ಸವ ಜರುಗಿತು.
ಸಂಜೆ 5 ಗಂಟೆಗೆ ಮಹಾರಥೋತ್ಸವಕ್ಕೆ ಗ್ರಾಮದ ರಾಚಯ್ಯಶಾಸ್ತ್ರಿ ಹಿರೇಮಠ ಚಾಲನೆ ನೀಡಿದರು. ಪವಾಡಯ್ಯ ಪೂಜೇರಿ, ಸುರೇಶ ಹಳ್ಳಿಕೇರಿ ಇದ್ದರು. ರಥೋತ್ಸವ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ವಿಶೇಷ ಪೂಜೆ: ಬೆಳಗ್ಗೆ 6 ಗಂಟೆಗೆ ಶ್ರೀಚ ಬಸವೇಶ್ವರ ಹಾಗೂ ಶ್ರೀ ಸಿದ್ದೇಶ್ವರ ದೇವರ ಗದ್ದುಗೆಗೆ ಪುಷ್ಪಾರ್ಚನೆ, ಬಿಲ್ವಾರ್ಚನೆ, ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರದಲ್ಲಿ ವಿವಿಧ ಧಾರ್ಮಿ ಕೈಂಕರ್ಯ ಹಾಗೂ ಮಹಾ ಪ್ರಸಾದ ನಡೆಯಿತು.
ಜಂಗೀ ಕುಸ್ತಿ ಪಂದ್ಯಾವಳಿ: ಜಾತ್ರಾ ಮಹೋತ್ಸವದ ಅಂಗವಾಗಿ ಮೇ 10 ರಿಂದ 11ರ ವರೆಗೆ ಹಮ್ಮಿಕೊಂಡಿದ್ದ ಜಂಗೀ ಕುಸ್ತಿ ಪಂದ್ಯಾವಳಿಗೆ ಗ್ರಾಪಂ ಸದಸ್ಯ ಮಂಜುನಾಥ ಚಿಂಚಿ ಚಾಲನೆ ನೀಡಿದರು. ಮುಖಂಡರಾದ ಮಾದೇವ ತೋಟಗಿ, ಶಂಕರ ಮುನವಳ್ಳಿ, ಮೌನೇಶ ಪತ್ತಾರ, ಚಂದ್ರಪ್ಪ ಹರಿಜನ, ಶ್ರೀಶೈಲ ಪೂಜೇರಿ, ನಿಂಗಪ್ಪ ಶೇಬಣ್ಣವರ ಇತರರಿದ್ದರು.
ಭಾನುವಾರ ರಾತ್ರಿ ದುಡ್ಡು ದಾರಿ ಬಿಡಿಸಿತು ನಾಟಕ ಪ್ರದರ್ಶನಗೊಂಡಿತು. ಮೇ 12ರಂದು ಬೆಳಗ್ಗೆ 8 ಗಂಟೆಗೆ ಮಹಾ ರಥೋತ್ಸವದ ಕಲಶ ಇಳಿಸುವ ಮೂಲಕ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.