

ಉಪ್ಪಿನಬೆಟಗೇರಿ: ಬನದ ಹುಣ್ಣಿಮೆ ಅಂಗವಾಗಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಬನಶಂಕರಿ ದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಹೆಬ್ಬಳ್ಳಿ ಬ್ರಹ್ಮಚೈತನ್ಯ ಆಶ್ರಮದ ದತ್ತಾವಧೂತ ಮಹಾರಾಜರು ಹಾಗೂ ಅರ್ಚಕರ ನೇತೃತ್ವದಲ್ಲಿ ಬೆಳಗ್ಗೆ ಬನಶಂಕರಿ ದೇವಿ ಮೂರ್ತಿಗೆ ಕ್ಷೀರಾಭಿಷೇಕ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 4 ಗಂಟೆಗೆ ಚಿಕ್ಕಮಗಳೂರ ಜಿಲ್ಲೆಯ ಮಾಚಗೊಂಡನಹಳ್ಳಿ ಬೇರುಗುಂಡಿ ಬ್ರಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹಾಗೂ ದತ್ತಾವಧೂತ ಮಹಾರಾಜರು ರಥೋತ್ಸವಕ್ಕೆ ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಗ್ಗಲಿಗೆ ಸಹಿತ ಸಕಲ ವಾಧ್ಯ ವೈಭವದೊಂದಿಗೆ ರಥೋತ್ಸವ ಆರಂಭವಾಯಿತು. ತೇರು ದೇವಸ್ಥಾನದಿಂದ ಒಂದು ಕಿಲೋ ಮೀಟರ್ ದೂರದ ರಾಮಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿವರೆಗೆ ಸಾಗಿ, ಮರಳಿ ದೇವಸ್ಥಾನದ ಆವರಣ ತಲುಪಿತು. ಸುಮಾರು ಒಂದು ಕ್ವಿಂಟಾಲ್ ತೂಕದ ಸುಗಂಧಿರಾಜ ಮಾಲೆಯಿಂದ ತೇರನ್ನು ಶೃಂಗರಿಸಲಾಗಿತ್ತು. ಭಕ್ತರು ರಥಕ್ಕೆ ಉತ್ತತ್ತಿ, ನಿಂಬೆ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.
ಮಾಜಿ ಶಾಸಕ ಅಮೃತ ದೇಸಾಯಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಗ್ರಾಪಂ ಅಧ್ಯಕ್ಷ ಮಂಜುನಾಥ ಭೀಮಕ್ಕನವರ, ಉಪಾಧ್ಯಕ್ಷೆ ಸುಶೀಲವ್ವ ಸಾಲಿ, ಶರಣು ಸಾಲಿ, ಲಕ್ಷ್ಮಣ ಅಂಬಿಗೇರ, ಗಣೇಶ ಹೂಲಿ, ಶಿವರಾಜ ಧಾರವಾಡ, ಸುರೇಶ ಬನ್ನಿಗಿಡದ, ವಿಠ್ಠಲ ಬೋವಿ, ರೇಖಾ ನಾಯ್ಕರ, ಗೀತಾ ದೇಸಾಯಿ ಸೇರಿ ಶಿವಳ್ಳಿ, ಕನಕೂರ, ತಲವಾಯಿ, ಚಂದನಮಟ್ಟಿ, ಅಮ್ಮಿನಬಾವಿ, ಮಾರಡಗಿ, ಗೋವನಕೊಪ್ಪ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.