

ನೆಲಮಂಗಲ: ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶ್ರೀರಾಮ, ಹನುಮ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ನಗರದ ಚೆನ್ನಪ್ಪ ಬಡಾವಣೆಯಲ್ಲಿ ಬುಧವಾರ ಶ್ರೀ ರಾಮಾಂಜನೇಯ ಸ್ವಾಮಿ ದೇವಾಲಯದ ಬಳಿ ಸಮಾವೇಶಗೊಂಡ ದೇವಾಲಯ ದತ್ತಿ ಸಮಿತಿ ಹಾಗೂ ವಿವಿಧ ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ದೇವರಿಗೆ ಪೂಜೆ ಸಲ್ಲಿಸಿದರು. ಶ್ರೀರಾಮ ಮಂದಿರದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರೀರಾಮನ ಪರ ಘೋಷಣೆ ಕೂಗಲಾಯಿತು.
ಕರಸೇವಕರಾದ ಶಿವಾಜಿರಾವ್‌ಶಿಂಧೆ, ಮೃತ್ಯುಂಜಯ, ಜಗದೀಶ್‌ಪ್ರಸಾದ್, ಲಕ್ಷ್ಮೀನರಸಿಂಹಯ್ಯ, ವರದರಾಜಸ್ವಾಮಿ ಅವರನ್ನು ಗೌರವಿಸಲಾಯಿತು. ಕರಸೇವೆಗೆ ತೆರಳಿದ್ದ ಸಂದರ್ಭದ ನೆನಪು ಮೆಲುಕು ಹಾಕಿದರು.
ಶ್ರೀ ರಾಮಮಂದಿರ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಪ್ರತೀಕ. ಇಂತಹ ಮಹತ್ವದ ಸಂಕಲ್ಪ ಈಡೇರಿಕೆಯಾಗಲು ಎಲ್ಲರ ಸಹಕಾರ ಅಗತ್ಯವಿದೆ. ರಾಮಮಂದಿರ ಭಾರತೀಯ ಕನಸು ಈಗ ನನಸಾಗುತ್ತಿದೆ ಎಂದು ಕರ ಸೇವಕ ಶಿವಾಜಿರಾವ್ ಶಿಂಧೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಹಿಂದುಪರಿಷತ್, ಹಿಂದು ಜಾಗರಣ ವೇದಿಕೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಜರಂಗದಳ ಮತ್ತು ಧರ್ಮಜಾಗರಣ ವೇದಿಕೆಯಂತಹ ಸಂಘಟನೆಗಳ ಸಮಾಗಮವಾಗಿತ್ತು.
ನಗರಸಭೆ ಸದಸ್ಯ ಎನ್.ಗಣೇಶ್, ಶ್ರೀರಾಮಾಂಜನೇಯ ದತ್ತಿ ಸಮಿತಿ ಅಧ್ಯಕ್ಷ ಚನ್ನರಾಯಪ್ಪ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ರಾಮ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೌಮ್ಯ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಹಿಂದುಪರ ಸಂಘಟನೆಗಳ ಕಾರ್ಯಕರ್ತರಾದ ಸ್ನೇಕ್‌ರಾಜು, ಎನ್.ಸಿ.ರುದ್ರೇಶ್, ಬಿ.ಎಸ್.ಶಶಿಕಿರಣ್, ಎನ್.ಎಸ್. ಪುನೀತ್, ಎನ್.ವಿಜಯ್‌ಕುಮಾರ್, ಎಸ್.ಎನ್,ವಿಜಯ್ ಮಾಲತೇಶ್, ಎಚ್.ಪವನ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ರವಿ, ಮುಖಂಡ ಬಿ.ಎಸ್.ಲೋಕೇಶ್, ಅಂಜನಾಮೂರ್ತಿ, ಎ.ಎಸ್.ರಾಮಮೂರ್ತಿ, ವಸಂತ್‌ಕುಮಾರ್, ಜನಸೈನ್ಯಸಂಘಟನೆ ಅಧ್ಯಕ್ಷ ಬಿ.ನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.