

| ಭರತ್ ಶೆಟ್ಟಿಗಾರ್ ಮಂಗಳೂರು
ಹಿಂದು ಪಂಚಾಂಗದ ಪ್ರಕಾರ ಈ ಬಾರಿ ಆಶ್ವೀಜ (ಅಶ್ವಿನಿ) ಅಧಿಕ ಮಾಸವಾಗಿ ಬಂದಿರುವುದರಿಂದ ಪ್ರಮುಖ ಹಬ್ಬಗಳಾದ ಶರನ್ನವರಾತ್ರಿ ಮತ್ತು ದೀಪಾವಳಿ ಒಂದು ತಿಂಗಳಷ್ಟು ತಡವಾಗಿ ಬರಲಿವೆ.
ಮಹಾಲಯ ಅಮಾವಾಸ್ಯೆ ಮರುದಿನದಿಂದ ಸಾಮಾನ್ಯವಾಗಿ ನವರಾತ್ರಿ ಉತ್ಸವಗಳು ಆರಂಭವಾಗುತ್ತವೆ. ಆದರೆ ಈ ವರ್ಷ ಅದೇ ದಿನ ಅಧಿಕ ಮಾಸ (ಅಧಿಕ ಅಶ್ವೀಜ ತಿಂಗಳು) ಶುರುವಾಗುವುದರಿಂದ ಸೆ.17ರಂದು ಮಹಾಲಯ ಅಮಾವಾಸ್ಯೆ ಬಂದರೂ, ಸುಮಾರು 1 ತಿಂಗಳು ಕಳೆದು ನವರಾತ್ರಿ ಆರಂಭವಾಗಲಿದೆ.
ಮಾಘ ಹೊರತುಪಡಿಸಿ, ಉಳಿದ ಮಾಸಗಳು ಒಮ್ಮೆಯಾದರೂ ಅಧಿಕ ಮಾಸವಾಗುತ್ತವೆ. ಯಾವ ಚಾಂದ್ರಮಾಸದಲ್ಲಿ ಸಂಕ್ರಾಂತಿ ನಡೆಯುವುದಿಲ್ಲವೋ ಅದನ್ನು ಮಲಮಾಸ ಅಥವಾ ಅಧಿಕ ಮಾಸ ಎನ್ನುತ್ತಾರೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ಎನ್ನುತ್ತಾರೆ ಮಂಗಳೂರು ಪಂಚಾಂಗ ತಜ್ಞ ನರಸಿಂಹ ಆಚಾರ್.
ಹಿಂದು ಪಂಚಾಂಗ ಪದ್ಧತಿಯಲ್ಲಿ 2 ಅಮಾವಾಸ್ಯೆ ಮಧ್ಯೆ ಸಂಕ್ರಾಂತಿ ಇಲ್ಲದಿದ್ದರೆ ಅದನ್ನು ಅಧಿಕ ಮಾಸ ಎನ್ನುತ್ತಾರೆ. 33 ತಿಂಗಳಿಗೊಮ್ಮೆ 1 ಅಧಿಕ ಮಾಸ ಬರುವುದರಿಂದ 3 ವರ್ಷಕ್ಕೊಮ್ಮೆ ಹಬ್ಬಗಳು 1 ತಿಂಗಳು ವ್ಯತ್ಯಾಸವಾಗುತ್ತವೆ. | ದೇರೆಬೈಲು ಶಿವಪ್ರಸಾದ್ ತಂತ್ರಿ ಜ್ಯೋತಿಷ್ಯ ಪ್ರಾಧ್ಯಾಪಕ, ಎಸ್ಎಂಎಸ್ಪಿ ಸಂಸ್ಕೃತ ಕಾಲೇಜು, ಉಡುಪಿ
ಈ ಬಾರಿಯ ಆಚರಣೆ
ಈ ಬಾರಿ ಸೆ.18ರಿಂದ ಅಧಿಕ ಅಶ್ವೀಜ ಮಾಸ ಆರಂಭವಾಗಿ, ಅ.16ರವರೆಗೆ ಇರುತ್ತದೆ. ಅ.17ರಿಂದ ‘ನಿಜ ಅಶ್ವೀಜ’ ಮಾಸ ಶುರುವಾಗಲಿದ್ದು, ಅಂದೇ ಶರನ್ನವರಾತ್ರಿ ಆರಂಭವಾಗಲಿದೆ. ಅ.24ಕ್ಕೆ ಆಯುಧ ಪೂಜೆ, 25ಕ್ಕೆ ವಿಜಯದಶಮಿ, ನ. 14ಕ್ಕೆ ನರಕ ಚತುರ್ದಶಿ, ನ.15ರಂದು ಬಲಿಪಾಡ್ಯ ಇರಲಿದೆ. ಎರಡು ಅಷ್ಟಮಿ: ಹಿಂದಿನ ಕೆಲ ವರ್ಷಗಳಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿ 2 ಸಲ ಆಚರಣೆ ಆಗಲಿದೆ. ವಿವಿಧೆಡೆ ಆ.11ರಂದು ಅಷ್ಟಮಿ, 12ರಂದು ಮೊಸರು ಕುಡಿಕೆ ಆಚರಿಸಲ್ಪಟ್ಟರೆ, ಉಡುಪಿಯಲ್ಲಿ ಸೆ.10ರಂದು ಕೃಷ್ಣ ಜಯಂತಿ ಮತ್ತು 11ರಂದು ವಿಟ್ಲ ಪಿಂಡಿ ಆಚರಣೆ ಆಗಲಿದೆ.