

ಕಾರ್ಗಲ್: ಪ್ರತಿಯೊಂದು ಹಬ್ಬಗಳ ಆಚರಣೆಯ ಹಿಂದೆ ಅದರದ್ದೇ ಆದ ಮಹತ್ವ ಹೊಂದಿದ್ದು, ಅತ್ಯಂತ ಶಾಂತಿ-ಸೌಹಾರ್ದತೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಆಚರಿಸುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ವಿ.ಕೃಷ್ಣಪ್ಪ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶುಕ್ರವಾರ ಕರೆಯಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬಗಳು ಶಾಂತಿಯ ಸಂಕೇತವಾಗಿವೆ. ಇವುಗಳ ಆಚರಣೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಬಾರದು. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಈ ಬಾರಿ ಹೆಚ್ಚು ಕಡಿಮೆ ಒಟ್ಟಿಗೆ ಬಂದಿವೆ. ಈ ಎರಡೂ ಹಬ್ಬಗಳನ್ನು ಎಲ್ಲರೂ ಅತ್ಯಂತ ಸೌರ್ದತೆಯಿಂದ ಆಚರಿಸುವಂತೆ ಕರೆ ನೀಡಿದರು.
ಗಣೇಶನನ್ನು ಪ್ರತಿಷ್ಠಾಪಿಸಲು ಪರವಾನಗಿಯನ್ನು ಪಡೆಯಲು ತಾಲೂಕು ಕೇಂದ್ರಕ್ಕೆ ಆಗಮಿಸುವ ಬದಲಿಗೆ ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಆಯಾ ಸಮಿತಿಯವರು ಮಾಹಿತಿಯನ್ನು ನೀಡಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಬ್‌ಇನ್ಸ್‌ಪೆಕ್ಟರ್ ಹೊಳ ಬಸಪ್ಪ ಹೋಳಿ ಮಾತನಾಡಿ, ಪೊಲೀಸ್ ಠಾಣಾ ವ್ಯಾಪ್ತಿಯ ಕರೂರು ಮತ್ತು ಭಾರಂಗಿ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಸುಮಾರು 70 ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದರಲ್ಲಿ 4 ಮಾತ್ರ ಸೂಕ್ಷ್ಮ ಪ್ರದೇಶವಾಗಿದ್ದು, ಉಳಿದ ಎಲ್ಲವೂ ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಅದರಲ್ಲಿ ಮೊದಲ ದಿನವೇ 56ಕ್ಕೂ ಅತೀ ಹೆಚ್ಚು ಗಣೇಶನನ್ನು ವಿಸರ್ಜನೆ ಮಾಡಲಾಗುತ್ತಿದೆ. ಬರುವೆ ಗ್ರಾಮದಲ್ಲಿನ ಗಣೇಶನನ್ನು ಮಾತ್ರ 7 ದಿನಕ್ಕೆ ಬಿಡಲಾಗುತ್ತಿದೆ ಎಂದರು.
ಪಪಂ ಮಾಜಿ ಅಧ್ಯಕ್ಷೆ ವಾಸಂತಿ ರಮೇಶ್, ಮಾಜಿ ಉಪಾಧ್ಯಕ್ಷ ಪಿ.ಮಂಜುನಾಥ್, ಮಾಜಿ ಸದಸ್ಯೆ ಲಲಿತಾ, ಜಮಾತ್ ಕಮಿಟಿ ಅಧ್ಯಕ್ಷ ಎಚ್.ಎಸ್.ಸಾದಿಕ್, ಪ್ರಮುಖರಾದ ವಿ.ಸಂತೋಷ್‌ಕುಮಾರ್, ಶ್ರೀಧರ್ ಲಿಂಗನಮಕ್ಕಿ, ಚಂದ್ರಶೇಖರ್ ಜೋಗ, ಜಾನ್ ಲಿಂಗನಮಕ್ಕಿ, ಹನೀಫ್, ರವಿ, ಗುರು ಲಿಂಗನಮಕ್ಕಿ ಸೇರಿದಂತೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ವಿವಿಧ ಸಮಿತಿಗಳ ಮುಖಂಡರು ಇದ್ದರು.