ಹಬ್ಬಗಳು ಸಾಮರಸ್ಯದ ಸಂಕೇತ

2.npk-1,
ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದಿಂದ ಆಯೋಜಿಸಿದ್ದ 33ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
Published on

ನಾಪೋಕ್ಲು: ಹಬ್ಬಗಳು ಸಾಮರಸ್ಯದ ಸಂಕೇತವಾಗಿದ್ದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.

ಇಲ್ಲಿನ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದಿಂದ ಆಯೋಜಿಸಿದ್ದ 33ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಿನಾದ್ಯಂತ ಆಯುಧ ಪೂಜೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸವಿದೆ. ವಾಹನ ಚಾಲಕರ ಸಂಘದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಆಯುಧಪೂಜೆ ಸಮಾರಂಭ ನಡೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ಮಾತನಾಡಿ, ಸಂಘದಿಂದ ಆಯೋಜಿಸಿದ್ದ ಆಯುಧ ಪೂಜಾ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಿದ್ದಾರೆ. ಮುಂದೆಯೂ ಇಂಥ ಸಹಕಾರವನ್ನು ನೀಡುವಂತಾಗಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ, ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡಿಯಂಡ ಕಟ್ಟಿ ಕುಶಾಲಪ್ಪ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು, ಕಾಫಿ ಬೆಳೆಗಾರ ಕುಂಡಿಯೊಳಂಡ ರಮೇಶ್ ಮುದ್ದಯ್ಯ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ, ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ಅನಿಲ್ ಕೆ.ಕೆ. ನಾಪೋಕ್ಲು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕುಲ್ಲೇಟಿರ ಅರುಣ್ ಬೇಬಾ, ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿದರು.

ಗ್ಯಾರಂಟಿ ಅನುಷ್ಠಾನ ಯೋಜನೆ ಜಿಲ್ಲಾ ಉಪಾಧ್ಯಕ್ಷ ಬೊಳ್ಳಂಡ ಗಿರೀಶ್, ಮಂಡಿರ ಕಿಶೋರ್ ತಮ್ಮಯ್ಯ, ಉದ್ಯಮಿ ಕಂಗಣ್ಣ ಅರುಣ್ ಮಂದಣ್ಣ, ಮನ್ಸೂರ್ ಆಲಿ, ಚೆಯಕಪೂವಂಡ ಸತೀಶ್ ದೇವಯ್ಯ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್.ವಸಂತ , ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಅಬ್ದುಲ್ ರಜಾಕ್, ಕೆಡಿಪಿ ಸದಸ್ಯ ಕಲಿಯಂಡ ಕೌಶಿ ಇದ್ದರು.

ಮೆರವಣಿಗೆ ಉದ್ಘಾಟನೆ: ಇದಕ್ಕೂ ಮೊದಲು ಹಳೇ ತಾಲೂಕಿನಲ್ಲಿ ಅಲಂಕೃತ ವಾಹನಗಳ ಮೆರವಣಿಗೆ ಉದ್ಘಾಟನೆ ನಡೆಯಿತು. ಕಾಫಿ ಬೆಳೆಗಾರ ಬೊಳ್ಳಚೆಟ್ಟೀರ ಸುರೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮ ಜನಾಂಗದ ಸಾಮರಸ್ಯಕ್ಕೆ ಕಾರಣವಾಗಲಿ ಎಂದರು. ಬಳಿಕ ಅಲಂಕೃತ ವಾಹನಗಳ ಅದ್ದೂರಿ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಮಾರುಕಟ್ಟೆ ಆವರಣದಲ್ಲಿ ವಾಹನಗಳ ಸಾಮೂಹಿಕ ಆಯುಧ ಪೂಜೆ ನಡೆಯಿತು. ಅರ್ಚಕ ಹರೀಶ್ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ವಿವಿಧ ವಿಭಾಗಗಳಲ್ಲಿ ವಿಜೇತರಾದ ಅಲಂಕೃತ ವಾಹನಗಳ ಚಾಲಕರಿಗೆ ಗಣ್ಯರು ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು.

ಉತ್ತಮ ಸೇವೆ ಸಲ್ಲಿಸಿದ ಆಟೋ ಚಾಲಕರಿಗೆ ಸನ್ಮಾನ ಮಾಡಲಾಯಿತು. ಸಂಘದ ಅಧ್ಯಕ್ಷ ಟಿ.ಪಿ.ಸುಕುಮಾರ್, ಉಸ್ಮಾನ್, ಬಿದ್ದಾಟಂಡ ಮಮತಾ ಚಿಣ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net