

ಚಳ್ಳಕೆರೆ: ತಾಲೂಕಿನ ಗೌರಸಮುದ್ರದಲ್ಲಿ ಮಂಗಳವಾರ (ಸೆ.19) ದಿಂದ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ಸ್ಥಳೀಯ ಆಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಮಧ್ಯಾಹ್ನ ಮಾರಮ್ಮ ಎನಿಸಿಕೊಂಡಿರುವ ದೇವಿ ಜಾತ್ರೆಗೆ ನೆರೆಯ ಆಂಧ್ರ, ತಮಿಳುನಾಡು ಭಾಗದ ಭಕ್ತರು ಆಗಮಿಸಲಿದ್ದು, ಈ ವರ್ಷ 5 ಲಕ್ಷಕ್ಕೂ ಅಧಿಕ ಜನರು ಸೇರುವ ವಿಶ್ವಾಸವಿದೆ ಎಂದು ದೇಗುಲ ಆಡಳಿತ ಸಮಿತಿ ಹೇಳಿದೆ.
ದೇವಿಯ ಜಾತ್ರೆ ನೆರವೇರುವ ತುಮಲಿಗೆ ಭಕ್ತರು ಆಗಮಿಸುವ 8 ರಸ್ತೆ ಭಾಗಗಳ ಜಾಲಿಗಿಡಗಳ ತೆರವು ಮತ್ತು ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.
ಸಾರು ಹಾಕುವುದು: ಮಾರಮ್ಮ ದೇವಿಯ ಮೂಲ ನೆಲೆ ಪಾವಗಡ ತಾಲೂಕಿನ ನಿಡುಗಲ್ಲು. ಅಲ್ಲಿಂದ ಬಂದ ದೇವಿ ಮೊದಲು ತುಮಲಿನಲ್ಲಿ ನೆಲೆ ಕಂಡು ಬಳಿಕ ಗೌರಸಮುದ್ರ ಗ್ರಾಮಕ್ಕೆ ಬಂದು ನೆಲೆಸಿರುವ ಪ್ರತೀತಿ ಇದೆ.
ಜಾತ್ರೆ ಆರಂಭವಾಗುವ ವಾರಕ್ಕೂ ಮುನ್ನ ಗೌರಸಮುದ್ರ, ಮಲ್ಲಸಮುದ್ರ, ಕೊಂಡ್ಲಹಳ್ಳಿ, ಬಂಡೆತಿಮ್ಲಾಪುರ, ಹನುಮಂತನಹಳ್ಳಿ, ಓಬನಹಳ್ಳಿ, ಬೋಗನಹಳ್ಳಿ, ಹಿರೇಹಳ್ಳಿ ಸೇರಿ 16 ಹಳ್ಳಿಗಳಲ್ಲಿ ಸಾರು ಹಾಕುವ ಪದ್ಧತಿ ಇದೆ.
ಸೆ.5 ರಿಂದ 12ರ ವರೆಗೆ ಗ್ರಾಮದ ಯಾರ ಮನೆಯಲ್ಲಿಯೂ ಮಾಂಸದ ಅಡುಗೆ ಮಾಡುವಂತಿಲ್ಲ. ಮನೆಯನ್ನು ಸ್ವಚ್ಛಗೊಳಿಸಬಾರದು.
ಒಲೆ ಮೇಲೆ ಹೆಂಚು ಇಡಬಾರದು. ಪೂಜೆ ಮಾಡಿದರೂ ಗಂಟೆ ಹೊಡೆಯುವ ಆಗಿಲ್ಲ. ಇಂತಹ ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ.
ವಿಶೇಷ ಪೂಜೆಗಳು: ಭಾನುವಾರ (ಸೆ.17) ಹುತ್ತಕ್ಕೆ ಅಭಿಷೇಕ, ಸೋಮವಾರ (ಸೆ.18) ದೇವಿಯ ಮೂಲ ಸನ್ನಿಧಿಗೆ ಅಭಿಷೇಕ, ಮಂಗಳವಾರ (ಸೆ.19)ತುಮಲಿನಲ್ಲಿ ಅದ್ದೂರಿ ದೇವಿಯ ಜಾತ್ರೆ ನೆರವೇರಲಿದೆ.
ಬುಧವಾರ (ಸೆ.20) ಓಕುಳಿ, ಬಳಿಕ ರಾತ್ರಿ ಉತ್ಸವ ಮೂರ್ತಿಯ ಮೆರವಣಿಗೆ, ಗುರುವಾರ (ಸೆ.21) ಮಾರಮ್ಮದೇವಿಗೆ ಮಹಾಮಂಗಳಾರತಿ ನಂತರ ಗರ್ಭಗುಡಿ ಪ್ರವೇಶ.
ಜಾತ್ರೆ ವೇಳೆ ಮಳೆ: ಗೌರಸಮುದ್ರಮ್ಮನ ಜಾತ್ರೆ ರೈತರ ಬೆಳೆ ಕಾಪಾಡುವ ಕೃಪೆ ಎನ್ನುವ ನಂಬಿಕೆಯಿದೆ. ಮಳೆ ಕೊರತೆಯಿಂದ ಸೊರಿಗಿದ ಬೆಳೆಗೆ, ದೇವಿ ಮಳೆಯ ರೂಪದಲ್ಲಿ ಜೀವ ಕಳೆ ತುಂಬುತ್ತಾಳೆ.
ತುಮಲಿನಲ್ಲಿ ಜಾತ್ರೆ ನೆರವೇರಿಸಿ ಸಂಜೆ ವೇಳೆಗೆ ಮಳೆಯ ರೂಪದಲ್ಲಿ ದೇವಿ ಆಶೀರ್ವಾದ ಭಕ್ತರಿಗೆ ದೊರೆಯಲಿದೆ ಎಂದು ಹಿರಿಯರು ಹೇಳುತ್ತಾರೆ.
ಬಹುವರ್ಷಗಳ ಬೇಡಿಕೆ ಆಗಿರುವ ಯಾತ್ರಿ ನಿವಾಸ ನಿರ್ಮಾಣಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಕ್ರಮ ಕೈಗೊಂಡಿದ್ದಾರೆ. ಮುಂದಿನ ಜಾತ್ರಾ ಮಹೋತ್ಸವ ವೇಳೆಗೆ ವಸತಿ ಗೃಹ ನಿರ್ಮಾಣ ಮಾಡಿಕೊಡುವ ವಿಶ್ವಾಸವಿದೆ.ಎಂ. ಓಬಣ್ಣ, ಗ್ರಾಪಂ ಅಧ್ಯಕ್ಷ