ಸಂಭ್ರಮದಿಂದ ಜರುಗಿದ ಬಸವೇಶ್ವರ ದೇವರ ಉತ್ಸವ

ಸಂಭ್ರಮದಿಂದ ಜರುಗಿದ ಬಸವೇಶ್ವರ ದೇವರ ಉತ್ಸವ
Published on

ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ಪೂಜಾ ಮಹೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನಡೆದವು. ಮೂಲ ದೇವರ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಬಾಳೆ ಕಂದು ಬಡಿಗಳಲ್ಲಿ ಅಲಂಕೃತ ದೇವರ ಮಂಟಪ ರೂಪಿಸಿ ಬಸವೇಶ್ವರ ದೇವರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಅಪಾರ ಭಕ್ತರು ದೇವಸ್ಥಾನದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿ ಭಾವ ಸಮರ್ಪಿಸಿದರು. ರಾತ್ರಿ ಅನ್ನ ಸಂತರ್ಪಣೆ ಮಾಡಲಾಯಿತು.

ಬೆಳಗ್ಗೆ ಬಾಳೆ ಕಂದು ಬಡಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಬಸವೇಶ್ವರ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಹೊರತಂದು ಅಲಂಕೃತ ಉತ್ಸವ ಅಡ್ಡೆ ಮೇಲೆ ಕೂರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಉತ್ಸವ ಅಡ್ಡೆಯನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿ ಗ್ರಾಮಸ್ಥರು ಭಕ್ತಿ ಮೆರೆದರು.

ಉತ್ಸವ ಸಾಗುವ ವೇಳೆ ಈಡುಗಾಯಿ ಒಡೆಯಲಾಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅರ್ಚಕ ಮಲ್ಲಪ್ಪ ನೇತೃತ್ವದಲ್ಲಿ ಪೂಜಾ ವಿಧಾನಗಳು ಜರುಗಿದವು. ಮಲ್ಲಿಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಎಂ.ಆರ್. ಮಂಜುನಾಥ್ ಹಾಗೂ ಗ್ರಾಮಸ್ಥರು ಇದ್ದರು. ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net