

ಮುಂಡರಗಿ: ಪಟ್ಟಣದ ಕೋಟೆ ಭಾಗದ ಹಿರಿಯರು ವಿಜಯದಶಮಿ ಪಾಢ್ಯದಿಂದ ದೀಪಾವಳಿ ಪಾಢ್ಯದವರೆಗೆ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನವೂ ರಾತ್ರಿ ಸಮಯದಲ್ಲಿ ಪಗಡೆ ಆಡಿ ಸಂಭ್ರಮಿಸಿದರು.
ಪಗಡೆಯನ್ನು ಯಾವುದೇ ಜೂಜಿಗಾಗಿ ಆಡದೆ ಮನರಂಜನೆ ಹಾಗೂ ಪ್ರಾಚೀನ ಕಾಲದ ಪರಂಪರೆ ಉಳಿಸುವ ಉದ್ದೇಶ ಹೊಂದಿದೆ ಎನ್ನುತ್ತಾರೆ ಸ್ಥಳೀಯರು.
ಪಾಂಡವರು ಹಾಗೂ ಕೌರವರ ಎಂಬ ಹೆಸರಿನಲ್ಲಿ ಎರಡು ಗುಂಪುಗಳನ್ನು ಮಾಡಿಕೊಂಡು ಒಂದು ಗುಂಪಿನಲ್ಲಿ 10 ಜನರಂತೆ 20 ಜನರು ಆಟವಾಡುತ್ತಾರೆ. ಕೊನೆಯ ದಿನದ ಆಟದ ನಂತರ ಪಗಡೆ ಆಟದ ವಸ್ತುಗಳನ್ನು ಒಂದೆಡೆ ಸಂಗ್ರಹಿಸಿಟ್ಟು ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿರಿಸಲಾಗುತ್ತದೆ ಪುನಃ ಮುಂಬರುವ ವಿಜಯದಶಮಿ ಹಬ್ಬದ ದಿನದಂದೆ ಅವುಗಳನ್ನು ಹೊರತೆಗೆಯಲಾಗುತ್ತದೆ.