ಆಲೇನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯ ದೇವರ ಉತ್ಸವ

18-kkr1(5-24
ಕಿಕ್ಕೇರಿ ಸಮೀಪದ ಆಲೇನಹಳ್ಳಿಯಲ್ಲಿ ಶಂಭುಲಿಂಗೇಶ್ವರ, ಈಶ್ವರ, ವಿಷ್ಣು ದೇವರ ಉತ್ಸವ ನಡೆಯಿತು.
Published on

ಕಿಕ್ಕೇರಿ: ರಂಗದಹಬ್ಬದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಮೀಪದ ಆಲೇನಹಳ್ಳಿ ಗ್ರಾಮದಲ್ಲಿ ವಿಷ್ಣು, ಈಶ್ವರ, ಶಂಭುಲಿಂಗೇಶ್ವರ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು.

ದೇವರ ಮೂರ್ತಿಗಳಿಗೆ ಹೇಮಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿಸಿ ದೃಷ್ಟಿದೋಷದಂತಹ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ವಿವಿಧ ಪರಿಮಳ ಪುಷ್ಪ, ವಸ್ತ್ರ, ಆಭರಣಗಳಿಂದ ಅಲಂಕರಿಸಿ ಮೂಡನಹಳ್ಳಿ ಮಾರ್ಗವಾಗಿ ಮಂಗಳವಾದ್ಯದೊಂದಿಗೆ ಗ್ರಾಮಕ್ಕೆ ತರಲಾಯಿತು. ಡೊಳ್ಳು ಕುಣಿತ, ವಿವಿಧ ಜಾನಪದ ಕಲಾತಂಡಗಳ ಮೇಳದೊಂದಿಗೆ ದೇವರ ಉತ್ಸವವನ್ನು ಗ್ರಾಮದ ರಂಗದಬೀದಿ ಮತ್ತಿತರ ಸ್ಥಳಗಳಲ್ಲಿ ಮೆರವಣಿಗೆ ಮಾಡಲಾಯಿತು.

ರಂಗಸ್ಥಳದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಗ್ರಾಮಸ್ಥರು ದೇವರಿಗೆ ಆರತಿ ಬೆಳಗಿ ಹಣ್ಣು, ಕಾಯಿ ಅರ್ಪಿಸಿದರು. ಯುವಕರು, ಮಕ್ಕಳು, ಹಿರಿಯರು ರಂಗಕುಣಿತ ಪ್ರದರ್ಶಿಸಿದರು.

ಮುಖಂಡರಾದ ನಾಗರಾಜು, ಲಕ್ಕಪ್ಪಗೌಡ, ರವಿಕುಮಾರ್, ಲಿಂಗರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net