

ಮದ್ದೂರು: ಹಲವು ವರ್ಷದ ನಂತರ ತಾಲೂಕಿನ ಹೂತಗೆರೆ ಗ್ರಾಮದಲ್ಲಿ ದೇವರ ಉತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ಲೋಕ ಕಲ್ಯಾಣಾರ್ಥವಾಗಿ ಗ್ರಾಮಸ್ಥರೆಲ್ಲರೂ ಸೇರಿ ಉತ್ಸವ ಆಯೋಜಿಸಿದ್ದರು. ಅದರಂತೆ ಹೂತಗೆರೆ ಗ್ರಾಮದ ಮಂಚಮ್ಮ, ಹೊಸಕೆರೆಯ ಬೀರೇಶ್ವರ, ಯಡನಹಳ್ಳಿ ಗ್ರಾಮದ ಸತ್ಯಪ್ಪ, ಹೊಸೂರುದೊಡ್ಡಿ ದೊಡ್ಡಯ್ಯ ಹಾಗೂ ಹೆಬ್ಬೆರೆಳು ಗ್ರಾಮದ ಹಿರಿಯಮ್ಮ ದೇವರನ್ನು ಆಹ್ವಾನಿಸಲಾಯಿತು. ಅಂತೆಯೇ ಶನಿವಾರ ಸಂಜೆಯಿಂದಲೇ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆದವು. ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಬಳಿಕ ರಾತ್ರಿಪೂರ್ತಿ ದೇವರ ಉತ್ಸವ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ ಭಕ್ತರಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಭಾನುವಾರ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ ಪ್ರಾರಂಭವಾಯಿತು. ಮಾತ್ರವಲ್ಲದೆ ಪೂಜೆಯ ಬಳಿಕ ಮಧ್ಯಾಹ್ನದಿಂದ ಅನ್ನದಾಸೋಹ ನಡೆಯಿತು. ಹೂತಗೆರೆ, ಅವಸರದಹಳ್ಳಿ, ದುಂಡನಹಳ್ಳಿ, ಮಾದಪ್ಪನಕೊಪ್ಪಲು, ಕುರುಬರದೊಡ್ಡಿ, ಚಿಕ್ಕಂಕನಹಳ್ಳಿ, ಹೆಬ್ಬೆರೆಳು, ದೊಡ್ಡಂಕನಹಳ್ಳಿ ಸೇರಿದಂತೆ ಹಲವು ಗ್ರಾಮಸ್ಥರು ಆಗಮಿಸಿದರು. ಮುದ್ದೆ, ಅವರೆಕಾಳು ಕೂಟು, ಸಾಂಬಾರು, ಅನ್ನ, ಬೂಂದಿ, ಪಾಯಸವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಸಂಜೆ ವೇಳೆಗೆ ಗ್ರಾಮಸ್ಥರ ಮನೆಯಲ್ಲಿ ದೇವರನ್ನು ಕೂರಿಸಿ ಪೂಜೆ ಮಾಡಿಸಲಾಯಿತು.