24ರಿಂದ ಬೆಟ್ಟಗೇರಿ ಭಗವತಿ ದೇವರ ಉತ್ಸವ

20.nk-4
Published on

ನಾಪೋಕ್ಲು: ಬೆಟ್ಟಗೇರಿ ಭಗವತಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವುದರೊಂದಿಗೆ ಜಿಲ್ಲಾಡಳಿತ, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನಕ್ಕೆ ಕಾಂಕ್ರಿಟ್ ರಸ್ತೆ, ಒಳಚರಂಡಿ, ವಿದ್ಯುತ್ ಸಂಪರ್ಕ, ಒಳಾಂಗಣ ಬಾವಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.

ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣದಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದು, ದುರ್ಗಮ ಹಾದಿಯಲ್ಲಿ ಬೆಟ್ಟದ ಮೇಲೆ ಸುಮಾರು 500 ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ತಲುಪುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಸರ್ಕಾರದ ಅನುದಾನದಿಂದ ಅರ್ಧ ಕಿಲೋಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು, ಇದೀಗ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ದೇವಸ್ಥಾನದ ಪಾಳು ಬಿದ್ದ ಬಾವಿಯನ್ನು ಶುಚಿಗೊಳಿಸಿ ಮೋಟಾರ್ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಲಾಗಿದೆ. ದೇವಸ್ಥಾನದ ಒಳಾಂಗಣಕ್ಕೆ 3.70 ಲಕ್ಷ ರೂ. ವೆಚ್ಚದಲ್ಲಿ ಚಪ್ಪಡಿ ಕಲ್ಲು, ಹೊರಾಂಗಣಕ್ಕೆ 2.12 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್, 1.38 ಲಕ್ಷ ರೂ. ವೆಚ್ಚದಲ್ಲಿ ನೂತನ ತೆರೆದ ಬಾವಿ, ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ನಡೆಸುವ ಮೂಲಕ ಭಗವತ್ ಭಕ್ತರನ್ನು ದೇಗುಲದೆಡೆಗೆ ಸೆಳೆಯುವಲ್ಲಿ ನೂತನ ಆಡಳಿತ ಮಂಡಳಿ ಯಶಸ್ವಿಯಾಗಿದೆ.

ಇನ್ನುಳಿದಂತೆ ಸಮುದಾಯ ಭವನ, ಹೊರಾಂಗಣ, ತಡೆಗೋಡೆ, ಅರ್ಚಕರಿಗೆ ನಿವಾಸ, ಬಾಕಿ ಇರುವ ಕಾಂಕ್ರಿಟ್ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ದೇವಸ್ಥಾನಕ್ಕೆ ಉದ್ಯಾನವನ, ವಿಷ್ಣುಮೂರ್ತಿ ದೇವರ ಗುಡಿಯ ಮರುನಿರ್ಮಾಣ, ಶೌಚಗೃಹ, ಉಗ್ರಾಣ ನಿರ್ಮಾಣ ಸೇರಿದಂತೆ ಹಲವಾರು ಕೆಲಸ ಕಾರ್ಯಗಳು ಆಡಳಿತ ಮಂಡಳಿಯ ನಿರೀಕ್ಷೆಯಲ್ಲಿದೆ.

ಮಾ.24 ಮತ್ತು 25 ರಂದು ದೇವರ ವಾರ್ಷಿಕ ಉತ್ಸವ ನಡೆಯಲಿದ್ದು, 24ರಂದು ಪಟ್ಟಣಿ, ಹಗಲು ವಿಶೇಷ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ಗಂಟೆಗೆ ಕಟ್ರತಂಡ ಕುಟುಂಬದ ಭಂಡಾರದ ಮನೆಯಿಂದ ಭಂಡಾರ ಹೊರಡುವುದು, 2 ಗಂಟೆಗೆ ಶಾಸ್ತಾವು ತೆರೆ, ಸಂಜೆ 5ಕ್ಕೆ ಆಂಬಲದಲ್ಲಿ ಭಗವತಿ ಅಯ್ಯಪ್ಪ ತೆರೆ, 6 ಗಂಟೆಗೆ ದೇವರು ಬನಕ್ಕೆ ಹೋಗುವುದು, ರಾತ್ರಿ 7.30ಕ್ಕೆ ಚೌಂಡಿ ತೋತ ಹಾಗೂ 9ಕ್ಕೆ ಮೇಲೇರಿ ಕುಂಟೆಗೆ ಅಗ್ನಿಸ್ಪರ್ಶ, ಮಂದಣ್ಣ ಮೂರ್ತಿ, ಅಂಜಿ ಕುಟ್ಟಿ ಮೂರ್ತಿ ಕರಿಬಾಳ ಹಾಗೂ ನುಚ್ಚಟ್ಟೆ ತೆರೆಗಳು ನಡೆಯಲಿವೆ. 25 ರಂದು ಬೆಳಗ್ಗೆ 11 ಗಂಟೆಗೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪೌಡಂಡ ಡಾಲಿ ಭೀಮಯ್ಯ, ಉಪಾಧ್ಯಕ್ಷ ವಿಜಯ ಚಿಣ್ಣಪ್ಪ, ಕಾರ್ಯದರ್ಶಿ ಚಳಿಯಂಡ ಕಟ್ಟಿ, ಖಜಾಂಚಿ ಚಳಿಯಂಡ ಪುಟ್ಟ ಯತೀಶ್, ಗೌರವ ಸಲಹೆಗಾರ ನೆಯ್ಯಣಿರ ಹೇಮಕುಮಾರ್ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net