

ಹಿರೀಸಾವೆ: ಹೋಬಳಿಯ ಉಳ್ಳಾವಳ್ಳಿ ಗ್ರಾಮದಲ್ಲಿ ಕಾರಹಬ್ಬದ ಪ್ರಯುಕ್ತ ಕರಿಗಲ್ಲು ಪೂಜೆ(ಶ್ರೀ ಬ್ರಹ್ಮದೇವರ ಕಲ್ಲು) ಹಾಗೂ ಜಾನುವಾರುಗಳ ಉತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವ ಎತ್ತಿನಬಂಡಿ, ನೇಗಿಲುಗಳಿಗೆ ಪೂಜೆ ಸಲ್ಲಿಸುವ ಪುರಾತನ ಹಬ್ಬ ಇದಾಗಿದೆ. ಈ ಆಚರಣೆಯಿಂದ ಕೃಷಿಯಲ್ಲಿ ಅಭಿವೃದ್ಧಿ, ಜಾನುವಾರುಗಳಿಗೆ ಆರೋಗ್ಯ ಹಾಗೂ ಆಯಸ್ಸು ಲಭಿಸುತ್ತದೆ ಎಂಬುದು ರೈತರ ಬಲವಾದ ನಂಬಿಕೆಯಾಗಿದೆ.
ಜಾನುವಾರುಗಳ ಮೈ ತೊಳೆದು, ಕೊಂಬುಗಳಿಗೆ ವಿವಿಧ ಬಗೆಯ ಬಣ್ಣ ಹಚ್ಚಿ ಬೆಲೂನ್ ಮತ್ತು ಸುನ್ನಾರಿ ಸುತ್ತಲಾಯಿತು. ಕುತ್ತಿಗೆಗೆ ಗೆಜ್ಜೆಹಾರ ಹಾಗೂ ಕಾಲಿಗೆ ಕರಿದಾರ ಕಟ್ಟಿ ಸಿಂಗರಿಸಲಾಯಿತು. ಜಾನುವಾರುಗಳ ಮೈಮೇಲೆ ಓಂ ಅಥವಾ ಸ್ವಸ್ತಿಕ್ ಹಾಗೂ ಜಾನುವಾರುಗಳು ಬಾಳುವ ಬೆಲೆಯನ್ನು ಬಣ್ಣದಿಂದ ಬರೆಯುವುದು ಒಂದು ಕಲೆಯಾಗಿದೆ.
ಜಾನುವಾರುಗಳ ಪಾದಪೂಜೆ: ಸಂಜೆ ಸುಮಾರಿನಲ್ಲಿ ಸಿಂಗಾರಗೊಂಡಿದ್ದ ಜಾನುವಾರುಗಳನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ ಮುಖ ತೊಳೆದು, ಕುಂಕುಮ ಹಚ್ಚಿ, ಹೂವು ಮುಡಿಸಲಾಯಿತು. ಪೂಜೆ ಮಾಡಿದ ಮುತೈದೆಯರು ತಮ್ಮ ಮಾಂಗಲ್ಯವನ್ನು ಜಾನುವಾರುಗಳ ಪಾದಕ್ಕೆ ಸ್ವರ್ಶಿಸಿ ಹಣೆಗೆ ಹೊತ್ತಿಕೊಂಡು, ಮಾಂಗಲ್ಯ ಭಾಗ್ಯ ಗಟ್ಟಿಗೊಳಿಸುವಂತೆ ಬೇಡಿಕೊಂಡರು.
ಬಳಿಕ ರೈತರು ತಮ್ಮ ತಮ್ಮ ಜಾನುವಾರುಗಳೊಂದಿಗೆ ಕರಿಗಲ್ಲು ಇರುವಲ್ಲಿ ಒಟ್ಟಾಗಿ ಸೇರಿದ್ದು ಕರಿಗಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಾನುವಾರುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ದಿಡಗ ಹಳೇ ಗ್ರಾಮದ ರಾಮಚಂದ್ರಯ್ಯ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ನಂಜುಂಡಣ್ಣ ಹೆಬ್ಬಾಗಿಲ ತೋರಣ ನಿರ್ವಹಣೆ ಹಾಗೂ ಮಂಗಳವಾದ್ಯ ನಡೆಸಿದರು.
ವಾಡಿಕೆಯಂತೆ ಮೂರು ಹೋರಿಗಳನ್ನು ಓಡಿಸಿಕೊಂಡು ಯುವಕರು ಊರನ್ನು ಒಂದು ಸುತ್ತು ಬಳಸಿ ಬಂದರು. ಅವರಲ್ಲಿ ಹೋರಿಯೊಂದಿಗೆ ದಲು ಬಂದ ವ್ಯಕ್ತಿ ಗ್ರಾಮದ ಹೆಬ್ಬಾಗಿಲಿಗೆ ಕಟ್ಟಿರುವ ದಂಡೆಯನ್ನು (ತೋರಣ) ಕೀಳುವ ಮೂಲಕ ಕಾರಹಬ್ಬಕ್ಕೆ ತೆರೆ ಎಳೆಯಲಾಯಿತು.
ಆಚರಣೆಯಲ್ಲಿ ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ಯೋಗೇಶ್, ನಿರ್ದೇಶಕ ಎಚ್.ಕೆ.ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಪ್ರಮುಖರಾದ ವೆಂಕಟೇಶ್, ರಾಮಚಂದ್ರು, ಕೃಷ್ಣೇಗೌಡ, ದೇವರಾಜ್ ಇತರರು ಇದ್ದರು.