

ವಿಜಯವಾಣಿ ಸುದ್ದಿಜಾಲ ಕಮಲಶಿಲೆ
ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಏ.16ರಿಂದ 21ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಶ್ರೀಮನ್ಮಹಾರಥೋತ್ಸವ ನಡೆಯಲಿದೆ.
16ರಂದು ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ ಜರುಗಲಿದ್ದು, 17ರಂದು ಸಿಂಹವಾಹನೋತ್ಸವ ನೆರವೇರಲಿದೆ. ಏ.18ರಂದು ಮಹಾರಂಗಪೂಜೆ, ಪುಷ್ಪಕ ವಾಹನೋತ್ಸವ, 19ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. 20ರಂದು ಚರ್ಣೋತ್ಸವ, ತುಲಾಭಾರ ಸೇವೆ, 21ರಂದು ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ನೆರವೇರಲಿದೆ.
ಆನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ, ಆನುವಂಶಿಕ ಮೊಕ್ತೇಸರ ಆಜ್ರಿ ಚಂದ್ರಶೇಖರ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಉತ್ಸವ ನಡೆಯಲಿದೆ.
ಪರಿವಾರ ದೇವಳಗಳು: ಶ್ರೀದೇವಿಯ ಎಡಭಾಗದಲ್ಲಿ ವೀರಭದ್ರ, ಹೊಸಮ್ಮ ದೇವರು, ಬಲಭಾಗದಲ್ಲಿ ಮುಡಂತಾಯ, ಸುಬ್ರಹ್ಮಣ್ಯ, ಹಿಂಭಾಗದಲ್ಲಿ ಈಶ್ವರ, ವಿಷ್ಣು, ಆಂಜನೇಯ, ನವಗ್ರಹ ಮತ್ತು ಗಣಪತಿ ದೇವರ ಗುಡಿಗಳಿವೆ. ದೇವಳದ ವತಿಯಿಂದ ಗೋ ಶಾಲೆ, ಯಕ್ಷಗಾನ ಮೇಳ, ವೇದ ಪ್ರಯೋಗ ಪಾಠ ತರಗತಿಗಳು ನಡೆಯುತ್ತಿವೆ.
ಕ್ಷೇತ್ರದಲ್ಲಿ ಇದ್ದ 126 ವರ್ಷಗಳಿಗೂ ಮೇಲ್ಪಟ್ಟ ಧ್ವಜಸ್ತಂಭವನ್ನು 2010ರಲ್ಲಿ ಬದಲಾಯಿಸಿ ನೂತನ ಧ್ವಜಸ್ತಂಭ ಸ್ಥಾಪಿಸಲಾಗಿದೆ. ದೇವಳದ ಗರ್ಭಗುಡಿ ಶಿಲಾಮಯವಾಗಿದ್ದು, ಹೊರ ಭಾಗದ ಚೌಕಟ್ಟು, ದ್ವಾರ ಬಾಗಿಲುಗಳು ರಜತ ಕವಚಗಳಿಂದ ಕೂಡಿವೆ. ಆಧುನಿಕ ಸೌಲಭ್ಯವುಳ್ಳ ವಸತಿ ಗೃಹಗಳು, ಮೂರು ಮಹಡಿಗಳ ಭೋಜನಾಲಯ, ಸಭಾಂಗಣಗಳು, ಶಿಲಾಮಯ ರಾಜಗೋಪುರ ನಿರ್ಮಾಣಗೊಂಡಿದೆ. ಕ್ಷೇತ್ರದಲ್ಲಿ ನಿತ್ಯ ಪೂಜೆ, ಪಂಚಪೂಜೆ, ಹೂವಿನ ಪೂಜೆ, ಶತರುದ್ರಾಭೀಷೇಕ, ಚಂಡಿಕಾಯಾಗ, ಬೆಳ್ಳಿ ರಥ, ಸರ್ವಾಭರಣ ಉತ್ಸವ, ಮಹಾ ರಂಗಪೂಜೆ, ಪುಷ್ಪಕ ರಥೋತ್ಸವ ಮೊದಲಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಕಮಲಶಿಲೆ ಕ್ಷೇತ್ರದ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಯು ಪಾತಳದಿಂದ ಲಿಂಗ ರೂಪಿಣಿಯಾಗಿ ನೆಲೆಸಿದ್ದಾಳೆ. ನೀರಿನಲ್ಲಿ ಜನಿಸಿ ಪರಮೇಶ್ವರನ ವರಿಸಿದ ಬಳಿಕ ಆದಿಶಕ್ತಿ ಪರಮೇಶ್ವರಿಯಾಗಿ ಜಗತ್ತಿಗೊದಗಿದ ಸಂಕಷ್ಟ ನಿವಾರಿಸಿದ ಬಳಿಕ ಬ್ರಹ್ಮಾಣಿ ಶಕ್ತಿಯಲ್ಲಿ ಐಕ್ಯವಾಗಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿಯಾಗಿ ಇಲ್ಲಿ ನೆಲೆಸಿದ್ದಾಳೆ ಎಂಬ ಇತಿಹಾಸವಿದೆ. ಇದು ಏಕೈಕ ಬ್ರಾಹ್ಮಿ ಕ್ಷೇತ್ರ.
ದೇವರ ಸೇವೆ ಸಲ್ಲಿಸಲು ಹಾಗೂ ದರ್ಶನವನ್ನು ಶೀಘ್ರವಾಗಿ ಪಡೆಯಲು ಅವಕಾಶವಿದೆ. ದೇವಳಕ್ಕೆ ಆಗಮಿಸುವ ಭಕ್ತರಿಗೆ ಪಾರ್ಕಿಂಗ್, ಶೌಚಗೃಹ ಸಹಿತ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯವೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. -ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಆನುವಂಶಿಕ ಆಡಳಿತ ಮೊಕ್ತೇಸರ https://www.vijayavani.net/rs-10-lakh-sanctioned-for-kundapur-sewak https://www.vijayavani.net/why-have-a-meeting-if-we-can-solve-the-problem-ourselves