ಪಂಚಮಿ ರಥದಲ್ಲಿ ಉತ್ಸವ

Sub_Panchami
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಾರ್ಗಶಿರ ಶುದ್ಧ ಪಂಚಮಿಯ ದಿನವಾದ ಶುಕ್ರವಾರ ಶ್ರದ್ಧಾ ಭಕ್ತಿಯ ಪಂಚಮಿ ರಥೋತ್ಸವ ನೆರವೇರಿತು. ಸ್ಕಂಧ ಪಂಚಮಿಯಂದು ಪಂಚಮಿ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯು ಉತ್ಸವ ನಡೆಯಿತು.

ಜಗಮಗಿಸುವ ವಿದ್ಯುದ್ದೀಪಾಲಂಕಾರದ ನಡುವೆ ಸ್ವಾಮಿಯ ವೈಭವದ ರಥೋತ್ಸವ ನೆರವೇರಿತು. ಸಹಸ್ರಾರು ಭಕ್ತರು ದೇವರ ಉತ್ಸವ ವೀಕ್ಷಿಸಿದರು.

ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣ ಉತ್ಸವ ಆರಂಭವಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದ ಪಾಲಕಿಯಲ್ಲಿ ದೇವರ ಉತ್ಸವ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ನೆರವೇರಿತು. ಸಂಗೀತ, ಮಂಗಳವಾದ್ಯ, ಸ್ಯಾಕ್ಸೋಪೋನ್, ಬ್ಯಾಂಡ್‌ಗಳ ಸುತ್ತುಗಳ ಉತ್ಸವದ ನಂತರ ರಥೋತ್ಸವ ನಡೆಯಿತು. ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಒಳಾಂಗಣ ಉತ್ಸವದ ಬಳಿಕ ರಥಬೀದಿಗೆ ಆಗಮಿಸಿ ದೇವರು ಪಂಚಮಿ ರಥದಲ್ಲಿ ಉತ್ಸವ ಸ್ವೀಕರಿಸಿದರು. ರಥೋತ್ಸವವು ರಥಬೀದಿಯಲ್ಲಿ ಸಾಗಿ ಕಾಶಿಕಟ್ಟೆ ತನಕ ನಡೆಯಿತು. ದೇವರು ದೇವಳಕ್ಕೆ ಹಿಂದಿರುಗಿ ಬರುವ ವೇಳೆ ಭಕ್ತರು ಆರತಿ ಮತ್ತು ಹಣ್ಣುಕಾಯಿ ಸಮರ್ಪಿಸಿದರು.

ವೈಭವದ ಕುಕ್ಕೆ ಬೆಡಿ: ಬಳಿಕ ಶ್ರೀ ದೇವರಿಗೆ ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಪೂಜೆ ನೆರವೇರಿತು. ಈ ಸಂದರ್ಭ ಆಕರ್ಷಕ ಸುಡುಮದ್ದು ಕುಕ್ಕೆ ಬೆಡಿ ಪ್ರದರ್ಶಿತವಾಯಿತು. ಬಳಿಕ ದೇವಳದಲ್ಲಿ ದೇವರಿಗೆ ಮಂಟಪೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net