

ಚಿಕ್ಕಮಗಳೂರು: ಕಾಫಿ ನಾಡಿನ ಸಾಂಸ್ಕೃತಿಕ ವೈಭವ ಬಿಂಬಿಸುವ ಜಿಲ್ಲಾ ಉತ್ಸವ ಫೆ.28ರಿಂದ ಮಾ.1ರವರೆಗೆ ವೈಭವಯುತವಾಗಿ ನಡೆಯಲು ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿದೆ.
ಮಾ.28ರ ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸವಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ, ಎಸಿ ಡಾ. ಎಚ್.ಎಲ್.ನಾಗರಾಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉತ್ಸವದ ಸಾಂಸ್ಕೃತಿಕ ಸಮಿತಿ ಹಲವು ಕಾರ್ಯಕ್ರಮ ನಡೆಸಲು ತಯಾರಿ ನಡೆಸಿದ್ದು ಪ್ರಮುಖವಾಗಿ ನಾಟಕೋತ್ಸವ, ಸಿನಿಮೋತ್ಸವ, ನೃತ್ಯೋತ್ಸವ, ಶಾಸ್ತ್ರೀಯ ಸಂಗೀತೋತ್ಸವ, ಸುಗಮ ಸಂಗೀತ, ಜಿಲ್ಲಾ ದರ್ಶನ (ವಿಷನ್- 2030) ಸಂವಾದ ಸೇರಿ ವೈವಿಧ್ಯಮಯ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಹಬ್ಬದ ಮೊದಲ ದಿನದಂದು ಜಿಲ್ಲಾ ಆಟದ ಮೈದಾನದಲ್ಲಿ ಜಾನಪದ ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಕಲಾವಿದರು ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ಮೂಲಕ ಜಿಲ್ಲಾ ಆಟದ ಮೈದಾನದವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಅದೇ ದಿನ ಕುವೆಂಪು ಕಲಾಮಂದಿರದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಹಗರಣ ನಾಟಕ ಪ್ರದರ್ಶನ, ನಂತರದಲ್ಲಿ ಉಡುಪಿಯ ಕೊಡವೂರಿನ ನೃತ್ಯನಿಕೇತನ ತಂಡದಿಂದ ಚಿತ್ರಾ, ನೃತ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಫೆ.29ರಂದು ಕುವೆಂಪು ಕಲಾಮಂದಿರದಲ್ಲಿ ಜಿಲ್ಲೆಯ ಕಲಾ ಸಂಸ್ಥೆಗಳಿಂದ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನೃತ್ಯ ರೂಪಕ, ಭರತನಾಟ್ಯ, ಶಾಸ್ತ್ರೀಯ ನೃತ್ಯ ಪ್ರದರ್ಶನ, ಮಾ.1ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಾಸ್ತ್ರೀಯ ಸಂಗೀತ, ಸಂಜೆ 4 ರಿಂದ 6 ಗಂಟೆಯವರೆಗೆ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಾ.1ರಂದು ಮೂಡುಬಿದ್ರೆಯ ಆಳ್ವಾಸ್ ನುಡಿಸಿರಿ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಡಾ. ರಮೇಶ್ ಇದ್ದರು.