ಭಕ್ತರ ಸಲಹುವ ಬೆನಕಟ್ಟಿ ಗ್ರಾಮದ ತಾಯಿ ದುರ್ಗಮ್ಮ

27BNK1r
Published on

ಮಹಾಂತೇಶ ಗಿಲಾಕಿ ಬೆನಕಟ್ಟಿ ಉತ್ತರ ಕರ್ನಾಟಕದ ಯಾತ್ರಾ ಸ್ಥಳಗಳಲ್ಲಿ ಒಂದಾದ ಬೆನಕಟ್ಟಿ ಗ್ರಾಮದ ಐತಿಹಾಸಿಕ ಶ್ರೀ ದುರ್ಗಮ್ಮ ದೇವಿ ಜಾತ್ರೆಯು ಫೆ.28ರಿಂದ ಮಾ.2 ವರೆಗೆ ಜರುಗಲಿದೆ. ಮಲಪ್ರಭಾ ಎಡದಂಡೆ ಕಾಲುವೆ ಹತ್ತಿರ ಹಚ್ಚ ಹಸಿರು ಪರಿಸರದ ಮಧ್ಯೆ ಕಂಗೊಳಿಸುತ್ತಿರುವ ದುರ್ಗಾದೇವಿ ದೇವಸ್ಥಾನವು ಭಕ್ತರ ಪಾಲಿನ ನೆಮ್ಮದಿಯ ತಾಣ. ಮಗಳನ್ನು ಮದುವೆ ಮಾಡಿಕೊಡುವಾಗ, ಸೊಸೆ ಕರೆತರುವಾಗ, ಬಿತ್ತನೆ ಮಾಡುವಾಗ ದೇವಿ ಗದ್ದುಗೆಯಲ್ಲಿ ಹೂವು ಹಚ್ಚಲಾಗುತ್ತದೆ. ಹೂವು ಯಾವ ದಿಕ್ಕಿಗೆ ಬೀಳುತ್ತದೆ ಎಂಬುದು ಹಾಗೂ ಪಲ್ಲಕ್ಕಿಯಿಂದ ಪ್ರಸಾದ ಪಡೆಯುವ ಮೂಲಕ ವರ ಬೇಡಲಾಗುತ್ತದೆ. ಇತಿಹಾಸ: ಗ್ರಾಮದ ಮಟಗೇರ ಕುಟುಂಬದವರು ಮನೆ ನಿರ್ಮಿಸುವಾಗ ಮಲೆನಾಡಿನಿಂದ ಎತ್ತಿನ ಬಂಡಿಯಲ್ಲಿ ಕಟ್ಟಿಗೆ ತರುತ್ತಿದ್ದರಂತೆ. ಆಗ ಬಂಡಿ ಹಿಂಭಾರವಾಯಿತು. ಮರದ ಬುಡದಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡು ಬಂಡಿಯ ಮುಂಭಾಗದಲ್ಲಿ ಇಟ್ಟುಕೊಂಡು ಬಂದರು. ನಂತರ ಆ ಕಲ್ಲನ್ನು ಮನೆಯ ಸ್ನಾನದ ಕೋಣೆಯಲ್ಲಿ ಇಟ್ಟರು. ಕೆಲ ದಿನಗಳ ನಂತರ ಮಟಗೇರ ಮನೆಯಲ್ಲಿರುವರಿಗೆ ಅನೇಕ ಕಾಯಿಲೆಗಳು, ಮನೆಯೊಳಗೆ ವಿಷ ಜಂತುಗಳು ಬರಲು ಪ್ರಾರಂಭ ಮಾಡಿದವು. ಇದರಿಂದ ಚಿಂತೆ ತಲೆದೋರಿತು. ಳಿಕ ತಮ್ಮ ಕುಟುಂಬದ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿಯ ಗ್ರಾಮದ ಅಲ್ಲಯ್ಯ ಸ್ವಾಮೀಜಿ ಹತ್ತಿರ ಸಮಸ್ಯೆ ಹೇಳಿಕೊಂಡರು. ‘ನಿಮ್ಮ ಮನೆಯ ಸ್ನಾನದ ಕೋಣೆಯಲ್ಲಿ ಒಂದು ಕಲ್ಲು ಇಟ್ಟು ಅದರ ಮೇಲೆ ನೀವು ಸ್ನಾನ ಮಾಡುತ್ತಿದ್ದೀರಿ. ಅದು ಸಾಮಾನ್ಯ ಕಲ್ಲಲ್ಲ. ಅದು ದೇವಿ ರೂಪ ತಾಳಿದ ಕಲ್ಲು. ಆ ಕಲ್ಲು ಪೂಜಿಸಿದರೆ ಒಳ್ಳೆಯದಾಗುತ್ತದೆ’ ಎಂದರು. ನಂತರ ಮಟಗೇರ ಮನೆತನದವರು ಕಲ್ಲಿಗೆ ದುರ್ಗಮ್ಮ, ಮರೆಮ್ಮ ಎಂದು ನಾಮಕರಣ ಮಾಡಿ ಪೂಜಿಸಿದರು. ಅಲ್ಲಿಂದ ಮನೆಗೆ ಶುಕ್ರದೆಸೆ ಆರಂಭವಾಯಿತು. ಅವರ ಕಷ್ಟಗಳು ದೂರಾದವು. ಜಾತ್ರೆಯ ವೇಳೆ ದೇವರಿಗೆ ಹುಗ್ಗಿಯನ್ನು ನೈವೇದ್ಯ ಮಾಡಿ, ಬಳಿಕ ರಾತ್ರಿ ಗ್ರಾಮದ ಓಣಿ ಓಣಿಗಳಲ್ಲಿ ಸಾಲಾಗಿ ಕುಳಿತು ಏಕಕಾಲಕ್ಕೆ ಹುಗ್ಗಿ ಪ್ರಸಾದ ಸವಿಯಲಿದ್ದಾರೆ. ಇದನ್ನು ಪ್ರತಿ ವರ್ಷ ಆಚರಿಸುತ್ತ ಬಂದಿದ್ದು, ಇದು ಇಲ್ಲಿಯ ಪ್ರತೀತಿಯಾಗಿದೆ. ಧಾರ್ಮಿಕ ಕಾರ್ಯಕ್ರಮಗಳು:ಫೆ.28ರಂದು ಬೆಳಗ್ಗೆ ಶ್ರೀ ದುರ್ಗಾದೇವಿಯ ರುದ್ರಾಭಿಷೇಕದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುವುದು. ಸಂಜೆ 4 ಗಂಟೆಗೆ ಶ್ರೀ ದುರ್ಗಾದೇವಿಯ ಪಲ್ಲಕ್ಕಿ ಮಹೋತ್ಸವವು ಮದ್ಲೂರ ಗ್ರಾಮಕ್ಕೆ ಹೊರಡುವುದು. ರಾತ್ರಿ ಡೊಳ್ಳಿನ ಹಾಗೂ ಭಜನಾ ಮೇಳಗಳಿಂದ ಜಾಗರಣೆ ಜರಗುವುದು. ಮಾ.1ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದ ಬಯಲಿನಲ್ಲಿ ಡೊಳ್ಳಿನ ಓಲಗ ಹಾಗೂ ಕರಡಿ ಮೇಳದವರಿಂದ ಕಲಾ ಪ್ರದರ್ಶನ ಮತ್ತು ಜಾನಪದ ಹಾಡುಗಳು, ಭಜನೆ ಜರುಗುವುದು. ಸಂಜೆ 4 ಗಂಟೆಗೆ ಪಲ್ಲಕ್ಕಿಯು ಮದ್ಲೂರ ಗ್ರಾಮದಿಂದ ಮರಳಿ ಬರುವುದು. ಅಂದು ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಜರುಗುವುದು. ಹಾಗೂ ರಾತ್ರಿ 10 ಗಂಟೆಗೆ ಮಹಾಪ್ರಸಾದ ವಿತರಣೆ ಜರುಗುವುದು. ಮಾ.2ರಂದು 51 ಜೋಡಿ ಸಾಮೂಹಿಕ ವಿವಾಹ ಸಮಾರಂಭ, ನಂತರ ಡೊಳ್ಳಿನ ಓಲಗ ಹಾಗೂ ಕರಡಿ ಮೇಳದವರಿಂದ ಕಲಾ ಪ್ರದರ್ಶನ ಮತ್ತು ಶ್ರೀ ದೇವಿಯ ಪ್ರಸಾದ ವಿತರಣೆ ಮಾಡಲಾಗುವುದು. ನಂತರ ಭಂಡಾರ ಒಡೆಯುವುದು. ರಾತ್ರಿ ಜಾನಪದ ಕಲಾವಿದರಿಂದ ಡೊಳ್ಳಿನ ಹಾಡುಗಳು ಜರುಗುವವು. ಶ್ರೀ ದುರ್ಗಾದೇವಿ ಜಾತ್ರೆಗೆ ಈಗಾಗಲೇ ಎಲ್ಲ ರೀತಿಯಿಂದ ಸಿದ್ಧತೆ ಮಾಡಲಾಗಿದೆ. ಶ್ರೀ ದೇವಿಯ ದರ್ಶನಕ್ಕಾಗಿ ಹಾಗೂ ಪ್ರಸಾದ ಸೇವಿಸಲು ಸೂಕ್ತವಾದ ವ್ಯವಸ್ಥೆ ಮಾಡಲಾಗಿದೆ. ಕರೆಪ್ಪ ಪೂಜೇರ, ಗ್ರಾಪಂ ಸದಸ್ಯರು ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ಹಾಗೂ ಮೂಲ ಸೌಕರ್ಯಗಳನ್ನು ದೇವಸ್ಥಾನದಲ್ಲಿ ಹಾಗೂ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪುಂಡಲೀಕ ಮರ್ದನ್ನವರ, ಶ್ರೀ ದೇವಿಯ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಮಹಾಪೂರ ಹರಿದು ಬರುತ್ತಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಗ್ರಾಮಸ್ಥರು ಸೂಕ್ತವಾದ ವ್ಯವಸ್ಥೆಯನ್ನು ಮಾಡುತ್ತಿರುವ ಸಂತಸವಾಗುತ್ತಿದೆ. ಅಪ್ಪಯ್ಯಪ್ಪ ಶಿರಸಂಗಿ, ಪಿಕೆಪಿಎಸ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net