

ಕಳಸ: ನಮ್ಮ ಆಚಾರ, ವಿಚಾರ, ಸಂಸ್ಕೃತಿ ಉಳಿಸುವ ದೃಷ್ಟಿಯಿಂದ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ಹೊರನಾಡು ಕ್ಷೇತ್ರದ ಟ್ರಸ್ಟಿ ರಾಜಲಕ್ಷ್ಮೀ ಬಿ. ಜೋಷಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದಿಂದ ಶನಿವಾರ ನಡೆದ ಸಂಕ್ರಾಂತಿ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಬ್ಬಗಳನ್ನು ಆಚರಿಸುವುದರಿಂದ ಕುಟುಂಬಸ್ಥರು ಒಟ್ಟು ಸೇರುವುದರಿಂದ ಸಂಬಂಧ ಗಟ್ಟಿಗೊಳ್ಳುತ್ತದೆ. ಪ್ರತಿ ಹಬ್ಬದ ಆಚರಣೆಯಲ್ಲೂ ಒಂದೊಂದು ವಿಶೇಷ ಖಾದ್ಯ ಮಾಡಲಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಮಾಡಲಾಗಿದೆ. ಪ್ರತಿ ಖಾದ್ಯಕ್ಕೂ ಅದರದೇ ಆದ ಔಷಧಿಯ ಗುಣಗಳು ಇದೆ. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲೂ ಹಬ್ಬ ಆಚರಿಸುವುದರಿಂದ ಭಾರತೀಯ ಸಂಸ್ಕೃತಿಯ ಹಬ್ಬಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ, ಒಳ್ಳೆಯ ಕಾರ್ಯಕ್ರಮಗಳು ನಡೆಯಲು ಉತ್ತಮ ಸಂಘಟನೆ ಅಗತ್ಯ. ಅಂಥ ಸಂಘಟನೆ ಮಹಿಳಾ ಸಾಹಿತ್ಯ ಪರಿಷತ್ತು ಆಗಿದೆ. ಸಾಹಿತ್ಯ ಪರಿಷತ್ತು ಮಹಿಳಾ ಘಟಕದಿಂದ ಪರಿಷತ್ತು ಮತ್ತಷ್ಟು ಗಟ್ಟಿಗೊಳ್ಳುತ್ತಿದೆ ಎಂದು ಹೇಳಿದರು.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಮ್, ಜಿಲ್ಲಾ ಸಂಚಾಲಕ ಪಾಂಡುರಂಗ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಸಾಹಿತಿ ಪ್ರೇಂಕುಮಾರ್, ಚಂಪಕಾ ರಾಘವೇಂದ್ರ, ಸುಜಾತಾ ಬಾಲಕೃಷ್ಣ ಭಟ್, ಸುಜಯಾ ಸದಾನಂದ, ಸರಸ್ವತಿ, ಸಿಂಧು ಪ್ರಭು, ಸುಮನಾ ಜಯರಾಜ್ ಇತರರಿದ್ದರು.