ಹನೂರಿನಲ್ಲಿ ಶ್ರದ್ಧಾ-ಭಕ್ತಿಯಿಂದ ಹಬ್ಬ ಆಚರಣೆ

07 HANUR 1
ಹನೂರಿನ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿರುವ ಹುತ್ತಕ್ಕೆ ಮಹಿಳೆಯರು ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ಷಷ್ಠಿ ಆಚರಿಸಿದರು.
Published on

ಹನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ಶನಿವಾರ ಹುತ್ತಕ್ಕೆ ಹಾಲನ್ನು ಎರೆಯುವುದರ ಮೂಲಕ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಹನೂರು ಸೇರಿದಂತೆ ಮಂಗಲ, ಕಣ್ಣೂರು, ಚನ್ನಾಲಿಂಗನಹಳ್ಳಿ, ಆರ್.ಎಸ್.ದೊಡ್ಡಿ, ರಾಮಾಪುರ, ಬಂಡಳ್ಳಿ, ಒಡೆಯರಪಾಳ್ಯ, ಪಿ.ಜಿ.ಪಾಳ್ಯ ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಉಪವಾಸವಿದ್ದ ಮಹಿಳೆಯರು ಕುಟುಂಬಸ್ಥರ ಸಮೇತ ತೆರಳಿ ಹುತ್ತಕ್ಕೆ ಹಾಲನ್ನೆರೆದು (ತನಿ) ಬಾಳೆಹಣ್ಣಿನ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರಲ್ಲದೆ, ಕೆಲವು ಕಡೆ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಹುತ್ತಕ್ಕೆ ಕೋಳಿಯನ್ನು ಬಲಿ ನೀಡಿ ರಕ್ತವನ್ನು ಸಮರ್ಪಿಸಿದರು. ಹನೂರು ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇಗುಲದ ಹಿಂಭಾಗದಲ್ಲಿರುವ ನಾಗರ ವಿಗ್ರಹ ಮೂರ್ತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಸಲ್ಲಿಸಿದರು. ಈ ಕಾರ್ಯ ಬೆಳಗ್ಗೆಯಿಂದ ಸಂಜೆಯ ತನಕವೂ ನಡೆಯಿತು.

ಹುತ್ತಗಳು ಕ್ಷೀಣ: ಇತ್ತೀಚಿನ ದಿನಗಳಲ್ಲಿ ಹನೂರು ಭಾಗದಲ್ಲಿ ಹುತ್ತಗಳು ನಶಿಸಿರುವುದರಿಂದ ಷಷ್ಠಿ ಆಚರಿಸುವವರು ಪೂಜೆ ಸಲ್ಲಿಸಲು ಹುತ್ತವನ್ನು ಹುಡುಕಿಕೊಂಡು ಕಿ.ಮೀ ಗಟ್ಟಲೇ ಅಲೆಯುವಂತಾಗಿತ್ತು. ಹನೂರಿನಲ್ಲಿ ಆರ್‌ಎಂಸಿ ಆವರಣ, ಬನ್ನಿಮಂಟಪ ಬಡಾವಣೆ, ಅಜ್ಜೀಪುರ ಗ್ರಾಮಕ್ಕೆ ತೆರಳುವ ರಸ್ತೆ ಬದಿಯ ಮಾಳ ಹಾಗೂ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿರುವ ಹುತ್ತಕ್ಕೆ ತೆರಳಿ ಜನರು ಪೂಜೆ ನೆರವೇರಿಸಿದರು. ಉಳಿದಂತೆ ಈ ಭಾಗದ ಹಳ್ಳಿಗಳಲ್ಲಿ ಮಹಿಳೆಯರು ಹೊರವಲಯದಲ್ಲಿರುವ ಹುತ್ತಕ್ಕೆ ತೆರಳಿ ಶ್ರದ್ಧಾಪೂರ್ವಕವಾಗಿ ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net