

ಮಳವಳ್ಳಿ: ತಾಲೂಕಿನ ತೆಂಕಹಳ್ಳಿ ಸಮೀಪದ ಶನೈಶ್ಚರ ದೇವಸ್ಥಾನದಲ್ಲಿ ಇತ್ತೀಚೆಗೆ 27ನೇ ವರ್ಷದ ಜಾತ್ರಾ ಮಹೋತ್ಸವ, ಗುರುವಂದನಾ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಮಹೋತ್ಸವದ ಪ್ರಯುಕ್ತ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶನೈಶ್ಚರ, ಮಹಾಗಣಪತಿ, ಆಂಜನೇಯ ಸ್ವಾಮಿ ಮೂರ್ತಿಗಳಿಗೆ ಅಭಿಷೇಕ, ಹೋಮ ಹವನ, ಮಹಾಮಂಗಳಾರತಿ ನೆರವೇರಿಸಲಾಯಿತು. ಶೋಭಕೃತ ನಾಮಸಂವತ್ಸರ ಉತ್ತರಾಯಣೇ ಪಾಲ್ಗುಣ ಮಾಸ ಶುಕ್ಲ ಸಪ್ತಮಿ ಸಮಯದಲ್ಲಿ ಶನೈಶ್ಚರ ಸ್ವಾಮಿಗೆ ಪ್ರಧಾನ ಅರ್ಚಕ ನಂಜುಂಡಸ್ವಾಮಿ ನೇತೃತ್ವದಲ್ಲಿ ವಿಶೇಷ ಅಭಿಷೇಕ, ಪೂಜೆಗಳು ನಡೆದವು. ಭಕ್ತರು ಕೊಡುಗೆಯಾಗಿ ನೀಡಿದ್ದ ತೇರಿನಲ್ಲಿ ಮಂಗಳವಾದ್ಯ, ಹಾಲರವಿಯೊಂದಿಗೆ ಶನೈಶ್ಚರ ಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು ಮೆರವಣಿಗೆ ನಡೆಸಲಾಯಿತು. ಈ ವೇಳೆ ವೀರಗಾಸೆ, ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.
ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮೀಜಿ, ಕನಕಪುರ ಮಠಾಧ್ಯ ಶ್ರೀಚನ್ನಬಸವಸ್ವಾಮೀಜಿ, ಮಲೈ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು. ನಂತರ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಹರಿಕಥಾ ವಾಚಕ ಶಿವಕುಮಾರ ಶಾಸ್ತ್ರಿ ನೇತೃತ್ವದ ತಂಡದವರು ಜಾನಪದ ಮತ್ತು ಭಕ್ತಿಗೀತೆಗಳನ್ನು ಹಾಡಿದರು.
ವಜ್ರೇಶ್ವರಿ ಡ್ರಾಮಾ ಸೀನರಿಯಲ್ಲಿ ರಂಗಮಂಟಪದಲ್ಲಿ ಮಾಕಳಿ-ಹೊಸಹಳ್ಳಿ ಗ್ರಾಮದ ಕಲಾವಿದರಿಂದ ಸಂಪೂರ್ಣ ರಾಮಾಯಣ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶನವಾಯಿತು. ತಾಲೂಕು ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಪೂಜಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ನೆರೆದ ಸಮೂಹಕ್ಕೆ ದೇವಸ್ಥಾನದ ವತಿಯಿಂದ ಅನ್ನ ದಾಸೋಹ ಏರ್ಪಡಿಸಲಾಗಿತ್ತು.