

ಚಿಕ್ಕಮಗಳೂರು: ತಾಲೂಕಿನ ಸಿರ್ಗಾಪುರದಲ್ಲಿ ಏರ್ಪಡಿಸಿದ್ದ 5ನೇ ವರ್ಷದ ದತ್ತಮಾಯಿ ಜಾತ್ರಾ ಮಹೋತ್ಸವವು ಹೋಮ ಹವನ, ಲಕ್ಷ ಬಿಲ್ವಫಲ ಸೇವೆ ಮೂಲಕ ಶುಕ್ರವಾರ ಸಂಪನ್ನಗೊಂಡಿತು.
ಮಳಲೂರು ಸಮೀಪದ ಶ್ರೀ ಗುರುದತ್ತ ಚೈತನ್ಯ ಷೋಡಶಿ ಸೇವಾಶ್ರಮದ ಔದುಂಬರ ದತ್ತಮಾಯಿ ಕಾಲಸರ್ಪ ಮಂದಿರದಲ್ಲಿ ಜ.13ರಂದು ರುದ್ರಾಭಿಷೇಕ ಸೇವೆ, ಅಷ್ಟದ್ರವ್ಯ ಗಣಪತಿ ಹವನದೊಂದಿಗೆ ಉತ್ಸವ ಆರಂಭವಾಯಿತು. ಚಂಡಿಕಾ, ರುದ್ರ, ಕಾಲಸರ್ಪ, ದತ್ತಾತ್ರೇಯನಿಗೆ ಲಕ್ಷ ಬಿಲ್ವಫಲ ಹವನದ ನಂತರ ಅರಿಶಿಣ, ಕುಂಕುಮ, ತೆಂಗಿನಕಾಯಿ, ವಿವಿಧ ಫಲ, ವಸ್ತ್ರಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಪೂರ್ಣಾಹುತಿ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿ ಪ್ರದಕ್ಷಿಣೆ, ಉಯ್ಯಾಲೋತ್ಸವ ಮಹಾ ಮಂಗಳಾರತಿ ಮಾಡಿ ಪ್ರಸಾದ ವಿನಿಯೋಗಿಸಲಾಯಿತು.
ಶಿರಸಿ, ಯಲ್ಲಾಪುರ, ಕಾರ್ಕಳದಿಂದ ದತ್ತಾಶ್ರಮದ ವೈದಿಕ ಪರಂಪರೆಯವರು ಆಗಮಿಸಿದ್ದರು. ಸಖರಾಯಪಟ್ಟಣ, ಕಳಸಾಪುರ, ಚಿಕ್ಕಮಗಳೂರಿನ ಋತ್ವಿಜರಿಂದ ರುದ್ರಪಠಣ, ಹರೇ ಶ್ರೀನಿವಾಸ ಭಜನಾ ಮಂಡಳಿಯ ಉದಯಸಿಂಹ ನೇತೃತ್ವದಲ್ಲಿ ಮಹಿಳೆಯರು ಭಜನೆ ಮಾಡಿದರು.
5ನೇ ವರ್ಷದ ದತ್ತಮಾಯಿ ಜಾತ್ರಾ ಮಹೋತ್ಸವದಲ್ಲಿ ಜ.13ರಂದು ಪ್ರಾತಃಕಾಲ ರುದ್ರಾಭಿಷೇಕದೊಂದಿಗೆ ನಾಂದಿ, ಅಂಕುರಾರ್ಪಣೆ, ಯಾಗಶಾಲೆ ಪ್ರವೇಶ, ಕುಂಡ ಸಂಸ್ಕಾರದೊಂದಿಗೆ ದತ್ತಮಾಯಿಗೆ ಸೇವೆ ಸಲ್ಲಿಸಲಾಗಿದೆ. ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದು, ಕರೊನಾ ಮುಕ್ತ ಜಗತ್ತಿಗಾಗಿ ಪ್ರಾರ್ಥಿಸಲಾಗಿದೆ ಎಂದು ಅಶೋಕ ಗಣಪತಿ ಶರ್ಮ ಹೇಳಿದರು.
ಅವಧೂತ ಅಶೋಕ ಗಣಪತಿ ಶರ್ಮ ಹಾಗೂ ಅರ್ಚಕ ಅಕ್ಷಯ ಶರ್ಮ, ಯಾಗದಲ್ಲಿ ಯಲ್ಲಾಪುರ ಪ್ರವೀಣ್ ಭಟ್, ಯಾಣ ವಿಶ್ವನಾಥ ಭಟ್, ಚಂದಗುಳಿ ಶಿವರಾಮ ಭಟ್, ಉತ್ಸವ ಸಮಿತಿ ಅಧ್ಯಕ್ಷ ಡಿ.ಎಂ.ಶಂಕರ್, ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಧಾರ್ವಿುಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು.