ಸಿರಿಗೆರೆಯಲ್ಲಿ ರಾಜ್ಯಮಟ್ಟದ ನುಡಿಹಬ್ಬ ಆಯೋಜನೆ

CTD KASAPA----
Published on

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದೊಂದಿಗೆ ಶ್ರೀಮಠದಲ್ಲಿ ರಾಜ್ಯಮಟ್ಟದ ನುಡಿ ಹಬ್ಬ ಆಯೋಜಿಸಲು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ತಿಳಿಸಿದ್ದಾರೆ.

ನುಡಿಹಬ್ಬ ಆಯೋಜನೆಗೆ ಸಂಬಂಧಿಸಿದಂತೆ ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ಕಸಾಪ ಅಧ್ಯಕ್ಷರು ಶ್ರೀಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀಗಳೊಂದಿಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ಸಿರಿಗೆರೆ ಮಠದ ಆಶ್ರಯದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಜರುಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪ್ರತಿ ವರ್ಷ ತರಳಬಾಳು ನುಡಿಹಬ್ಬವನ್ನು ನವೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಈ ಬಾರಿ ವಿಭಿನ್ನವಾಗಿ ಶ್ರೀ ಮಠದಿಂದ ಆಯೋಜಿಸಲು ಅವಕಾಶ ನೀಡಬೇಕೆಂದು ವಿನಂತಿಸಲಾಯಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ಶ್ರೀಗಳು ನುಡಿ ಹಬ್ಬದಲ್ಲಿ ಅರ್ಥಪೂರ್ಣ ಚರ್ಚೆ ಮತ್ತು ಕವಿಗೋಷ್ಠಿಗಳನ್ನು ಆಯೋಜಿಸುವಂತೆ ಸಲಹೆ ನೀಡಿದ್ದಾರೆ ಎಂದರು.

ಶ್ರೀಮಠದ ಆವರಣದ ಶಾಂತಿವನದಲ್ಲಿ ವಿಶೇಷ ಕವಿಗೋಷ್ಠಿ ಏರ್ಪಡಿಸಿ ರಾಜ್ಯದ ಪ್ರಮುಖ ಸಾಹಿತಿಗಳು, ಕವಿಗಳನ್ನು ಆಹ್ವಾನಿಸುವಂತೆ ನಿರ್ದೇಶಿಸಿದರು ಎಂದು ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾಹಿತಿಗಳು, ಕವಿಗಳನ್ನು ಈ ನುಡಿಹಬ್ಬದಲ್ಲಿ ವಿಶೇಷವಾಗಿ ಆಹ್ವಾನಿಸಲಾಗುವುದು ಎಂದರು.

ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿ, ಈ ಬಾರಿ ಮೂರು ಜಿಲ್ಲೆಗಳಿಂದ ಜು.27ರಂದು ಅಂತರ ಜಿಲ್ಲಾ ಕವಿಗೋಷ್ಠಿ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಚಿತ್ರದುರ್ಗ ಕಸಾಪ ಜಿಲ್ಲಾ ಕಾರ್ಯದರ್ಶಿ ಮಳಲಿ ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net