

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸ ವರ್ಷ ಯುಗಾಗಿ ಹಬ್ಬದ ಹಿಂದೆಗೆ ಆಗಮಿಸಿರುವ ಶ್ರೀರಾಮನವಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಯುಗಾದಿ ಹಬ್ಬದ ವೇಳೆ ಗಗನಕ್ಕೇರಿದ ಹೂ, ತರಕಾರಿ ಬೆಲೆ ಶ್ರೀರಾಮನವಿ ವೇಳೆ ಮತ್ತಷ್ಟು ಏರಿಕೆ ಕಂಡುಬಂದಿದೆ.
ಶ್ರೀರಾಮನವಮಿಯ ವಿಶೇಷವಾಗಿ ಕೋಸಂಬರಿ, ಪಾನಕ, ಮಜ್ಜಿಗೆ ಹೆಚ್ಚು ಬಳಸಲಾಗುತ್ತದೆ. ಮನೆಮನೆಗಳಲ್ಲೂ ಇವು ಕಾಯಂ ಪ್ರಸಾದವಾಗಿ ಬಳೆಯಾಗುತ್ತದೆ ಅದೇ ರೀತಿ ದೇಗುಲಗಳಲ್ಲಿ, ಸಂಘಟನೆಗಳಿಂದಲೂ ಇವು ಪ್ರಮುಖ ಸ್ಥಾನ ಪಡೆಯುತ್ತವೆ. ಆದರೆ ಇವುಗಳ ಬಳಕೆಗೆ ಪ್ರಮುಖವಾಗಿ ಅಗತ್ಯವಿರುವ ಸೌತೇಕಾಯಿ, ನಿಂಬೆಹಣ್ಣು, ಕರ್ಬೂಜಾ ದರಗಳು ದಿಢೀರ್ ಏರಿಕೆ ಕಂಡುಬಂದಿವೆ. ಈಗಾಗಲೇ ರಾಶಿಗಟ್ಟಲೆ ಸೌತೆಕಾಯಿ, ನಿಂಬೆಹಣ್ಣು ಹಾಗೂ ಕರ್ಬೂಜಾ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದ್ದು ಗ್ರಾಹಕರ ಜೇಬು ಸುಡುತ್ತಿದೆ, ಆದರೆ ಬೆಲೆ ಏರಿಕೆ ಬಿಸಿ ಹಬ್ಬದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ, ಮಾರುಕಟ್ಟೆಗಳಲ್ಲಿ ಗ್ರಾಹಕರು ಸಡಗರ ಸಂಭ್ರಮದಿಂದಲೇ ಹಬ್ಬದ ಸಾಮಾಗ್ರಿ ಖರೀದಿ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. 1 ಕೆ.ಜಿ ಕರ್ಬೂಜ ಖರೀದಿಸಿದರೆ 40ರಿಂದ 50 ರೂಪಾಯಿ ಅದೇ 3 ಕೆ.ಜಿ ಖರೀದಿಸಿದರೆ 100 ರೂಪಾಯಿ ಎಂಬ ಆರ್‌ಗಳಲ್ಲಿ ಮಾರಾಟ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇದು ವ್ಯಾಪಾರಿಗಳೂ ಹಾಗೂ ಗ್ರಾಹಕರಿಗೂ ಅನುಕೂಲವಾಗಿದ್ದು ಹೆಚ್ಚಿನ ಮಂದಿ ಆರ್‌ಗಳಲ್ಲಿ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಸಾಮಾನ್ಯ ಗಾತ್ರದ ನಿಂಬೆಹಣ್ಣಿಗೆ 5 ರಿಂದ 7 ರೂಪಾಯಿ ದರ ಕಂಡುಬಂದರೆ ಐದಾರು ನಿಂಬೆ ಕೊಂಡರೆ ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯಾಪಾರ ಕಂಡುಬರುತ್ತಿದೆ. ಅದೇ ರೀತಿ ಸೌತೆ ಕಾಯಿಗೂ ಹೆಚ್ಚಿನ ಬೇಡಿಕೆ ಬಂದಿದ್ದು ಮಾರುಕಟ್ಟೆಗಳಲ್ಲಿ ತಳ್ಳುಗಾಡಿಗಳಲ್ಲಿ ಸೌತೆಕಾಯಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಆಂಜನೇಯ, ಶ್ರೀರಾಮ ದೇಗುಲಗಳಲ್ಲಿ ಹಬ್ಬ: ಜಿಲ್ಲೆಯ ಹಲವು ಕಡೆಗಳಲ್ಲಿನ ಆಂಜನೇಯ ಸ್ವಾಮಿ ದೇವಾಲಯ ಮತ್ತು ಶ್ರೀರಾಮರ ದೇವಾಲಯಗಳಲ್ಲಿ ರಾಮನವಮಿ ಹಬ್ಬದ ಆಚರಣೆಗಾಗಿ ದೇವಾಲಯದ ಆವರಣ ಶುಚಿ ಮಾಡುವುದು, ದೇವಾಲಯಕ್ಕೆ ಹೂವಿನ ಅಲಂಕಾರ ಸೇರಿ ಪಾನಕ, ಮಜ್ಜಿಗೆ, ಕೋಸಂಬರಿ, ತಯಾರಿಗೆ ಬೇಕಾದ ವಸ್ತುಗಳ ಸಿದ್ಧತೆಗಳು ನಡೆದಿವೆ. ಸಾರ್ವಜನಿಜಕ ಸ್ಥಳಗಳಲ್ಲಿ ಪಾನಕ,ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆಗೆ ಸಂಘಟನೆಗಳು ಸಿದ್ದವಾಗಿವೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ತುಸು ದರ ಏರಿಕೆ ಎನಿಸುತ್ತಿದೆ, ಪ್ರತಿ ಹಬ್ಬಗಳನ್ನು ಇದು ಸಾಮಾನ್ಯ ಆದರೆ ಹಬ್ಬದ ಸಂಭ್ರಮಕ್ಕೆ ದರ ಏರಿಕೆ ಭಾರ ಎನಿಸುವುದಿಲ್ಲ. ಪಾನಕ, ಮಜ್ಜಿಗೆ ಕೋಸಂಬರಿ ಮಾಡದಿದರೆ ಶ್ರೀರಾಮನವಮಿ ಆಚರಿಸಿದಂತೆಯೇ ಆಗುವುದಿಲ್ಲ. ಆದ್ದರಿಂದ ಇವುಗಳ ಖರೀದಿ ಕಡ್ಡಾಯ. ಶ್ರೀರಾಮ ನಾಡಿನ ಎಲ್ಲರಿಗೂ ಒಳಿತು ಮಾಡಲಿ ಎಂದು ಆಶಿಸುತ್ತೇನೆ.
ವಾರುಣಿದೇವಿ, ಗ್ರಾಹಕರು ದೊಡ್ಡಬಳ್ಳಾಪುರ
---------
ಶ್ರೀರಾಮನವಮಿಗೆ ಸಾಮಾನ್ಯವಾಗಿ ಪ್ರತಿಯೊಬ್ಬರು ಪಾನಕ ಮಾಡುತ್ತಾರೆ, ಪಾನಕಕ್ಕೆ ಕರ್ಬೂಜಾ ಹಣ್ಣನ್ನು ಯಥೇಚ್ಚವಾಗಿ ಬಳಸುತ್ತಾರೆ ಆದ್ದರಿಂದ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಸಾಕಷ್ಟು ಕರ್ಬೂಜಾ ಮಾರಾಟಕ್ಕಿಟ್ಟಿದ್ದೇವೆ, ಬೆಳಗ್ಗೆಯಿಂದಲೂ ಒಳ್ಳೆಯ ವ್ಯಾಪಾರವಾಗುತ್ತಿದೆ. ಬೆಲೆ ಏರಿಕೆಯಿದ್ದರೂ ಖರೀದಿಗೆ ಯಾವುದೇ ತೊಂದರೆಯಾಗಿಲ್ಲ.
ಕಾಶಿರಾಮ, ವ್ಯಾಪಾರಿ ಹೊಸಕೋಟೆ