

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಿಹಿಹೋಳಿಗೆಯೊಂದಿಗೆ ಯುಗಾದಿಯನ್ನು ಸ್ವಾಗತಿಸಿದ ಗ್ರಾಮಾಂತರ ಜಿಲ್ಲೆಯ ಜನ ಮಂಗಳವಾರ ಹೊಸ್ತೊಡಕಿನ ಹಬ್ಬದೂಟ ಸವಿಯಲು ಸಜ್ಜಾಗಿದ್ದಾರೆ.
ಸಾಮಾನ್ಯವಾಗಿ ಯುಗಾದಿ ಹಬ್ಬ ಕಳೆದ ಮಾರನೇ ದಿನವೇ ಹೊಸ್ತೊಡಕು ಆಚರಣೆಯಾಗುತ್ತದೆ ಆದರೆ ಈ ಬಾರಿ ಭಾನುವಾರ ಯುಗಾದಿ ಹಬ್ಬ ಬಂದಿರುವುದರಿಂದ ಸೋಮವಾರ ಮಾಂಸಹಾರಕ್ಕೆ ನಿರ್ಬಂಧವಿರಲಿದೆ, ಹೀಗಾಗಿ ಮಂಗಳವಾರಕ್ಕೆ ಮುಂದೂಡಿಕೆಯಾಗಿರುವ ಹೊಸ್ತೊಡಕನ್ನು ಜಿಲ್ಲೆಯ ಜನರು ಉತ್ಸುಕತೆಯಿಂದ ಬರಮಾಡಿಕೊಳ್ಳಲಿದ್ದಾರೆ. ಕಳೆದೆರಡು ವರ್ಷದ ಹಿಂದೆ ಮಳೆ ಕೊರತೆಯಿಂದ ಕೆರೆಕಟ್ಟೆಗಳು ಒಣಗಿ ಕೃಷಿ ಚಟುವಟಿಕೆ ಮೇಲೆ ಬರದ ಛಾಯೆ ಆವರಿಸಿತ್ತು, ಆದರೆ ಈ ಬಾರಿ ಉತ್ತಮ ಮಳೆಯಿಂದ ಸಮೃದ್ಧ ಬೆಳೆ ಕಂಡಿರುವ ಗ್ರಾಮೀಣ ಜನರು ಹೊಸ್ತೊಡಕನ್ನು ಸಂಭ್ರಮಿಸಲಿದ್ದಾರೆ.
ಸೂರ್ಯೋದಯಕ್ಕೆ ಮುನ್ನವೇ ಸಾಲು: ಸೋಮವಾರ ತಡರಾತ್ರಿಯಿಂದಲೇ ಮಾಂಸದ ಅಂಗಡಿಗಳಲ್ಲಿ ಕುರಿ, ಮೇಕೆ ಕೋಳಿಗಳ ಮಾಂಸಕ್ಕೆ ಸಿದ್ದತೆ ಆರಂಭವಾಗುತ್ತದೆ, ಮಂಗಳವಾರ ಮುಂಜಾನೆಯಿಂದಲೇ ಗ್ರಾಹಕರು ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಲಿದ್ದಾರೆ, ಕೆಲವು ಕಡೆಗಳಲ್ಲಿ ಈಗಾಗಲೇ ಮಾಂಸಕ್ಕೆ ಮುಂಗಡ ಬುಕಿಂಗ್ ಮಾಡಿಕೊಂಡಿರುತ್ತಾರೆ, ಗಂಟೆಗಟ್ಟಲೆ ಕಾದು ಮಾಂಸ ಖರೀದಿಸುವ ದೃಶ್ಯಗಳು ಕಂಡುಬರಲಿವೆ.
ಕುರಿ,ಮೇಕೆ ವ್ಯಾಪಾರ ಜೋರು:
ಗ್ರಾಮೀಣ ಪ್ರದೇಶಗಳಲ್ಲಿನ ಕೂಡು ಕುಟುಂಬಗಳು ಸೇರಿ ಕುರಿ, ಮೇಕೆಗಳನ್ನು ಕತ್ತರಿಸುವ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿವೆ, ಕುರಿಗಳನ್ನು ಕಟಾವು ಮಾಡಿ ಮಾಂಸವನ್ನು ಹಂಚಿಕೊಳ್ಳಲಾಗುತ್ತದೆ, ಕೆಲವು ಕಡೆಗಳಲ್ಲಿ ಆರೇಳು ತಿಂಗಳ ಮುಂಚೆಯೇ ಕುರಿ, ಮೇಕೆಗಳನ್ನು ತಂದು ಸಾಕಲಾಗುತ್ತದೆ, ಹೊಸ್ತೊಡಕಿನ ದಿನ ಅವುಗಳನ್ನು ಕಡೆದು ಮಾರಾಟ ಮಾಡುವ ಪದ್ಧತಿಯೂ ಇದೆ.
ಗುಡ್ಡೆಮಾಂಸಕ್ಕೆ ಚೀಟಿ: ಯುಗಾದಿ ಹಬ್ಬಕ್ಕೂ ಮೊದಲೇ ಇಂತಿಷ್ಟು ಹಣ ನಿಗದಿ ಮಾಡಿಕೊಂಡು ಹಲವರು ಚೀಟಿಗಳನ್ನು ಹಾಕಿಕೊಂಡು ಹೊಸ್ತೊಡಕು ದಿನದಂದು ಗುಡ್ಡೆಮಾಂಸ ಪಡೆಯುವ ಪರಿಪಾಠ ಗ್ರಾಮೀಣಭಾಗದಲ್ಲಿ ಈ ಹಿಂದೆಯಿಂದಲೂ ರೂಢಿಯಲ್ಲಿದೆ. ಕೆಲ ಗ್ರಾಮಗಳಲ್ಲಿ ಗುಡ್ಡೆಮಾಂಸ ನೀಡುವ ಸಲುವಾಗಿ ನಾಲ್ಕೈದು ದಿನ ಮುಂಚಿತವಾಗಿ ಕುರಿ,ಮೇಕೆ ಖರೀದಿಸಿ ತಂದಿಟ್ಟುಕೊಂಡಿದ್ದಾರೆ. ಯುಗಾದಿ ಹಬ್ಬ ಕಳೆದ ಬಳಿಕ ಗ್ರಾಮೀಣ ಭಾಗಗಳಲ್ಲಿ ಹೊಸ್ತೊಡಕು ಹಬ್ಬವನ್ನು ಭರ್ಜರಿಯಾಗಿ ಆಚರಿಸುವುದರಿಂದ ಗುಡ್ಡೆ ಮಾಂಸ ಖರೀದಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಕುರಿ ಮೇಕೆಗಳನ್ನು ಕಡಿದು ಗುಡ್ಡೆ ಮಾಂಸ ವಿತರಿಸುವ ಕಾರ್ಯ ಕಂಡುಬರಲಿದೆ.
ಸಂತೆಗಳಲ್ಲಿ ಕುರಿಮಂದೆ: ಸಂತೆಗಳಲ್ಲಿ ಮೇಕೆ ಹಾಗೂ ಕೋಳಿಗಳ ವ್ಯಾಪಾರ ಜೋರಾಗಿ ನಡೆಯಿತು. ವಿವಿಧ ತಳಿಗಳ ಸಾವಿರಾರು ಕುರಿಗಳು ಕಂಡುಬಂದವು. ರಾಮನಗರ ಆನೇಕಲ್, ದೇವನಹಳ್ಳಿ, ತುಮಕೂರು, ಬಂಗಾರಪೇಟೆ, ತಮಿಳುನಾಡಿನ ಹೊಸೂರು, ಸೇಲಂ, ಕೃಷ್ಣಗಿರಿ, ಚಿತ್ತೂರು, ಮದನಪಲ್ಲಿ, ಕಡಪ ಮುಂತಾದ ಕಡೆಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಕುರಿಗಳ ವ್ಯಾಪಾರದಲ್ಲಿ ತೊಡಗಿದ್ದರು. ಸಂತೆಯ ಹಲವು ಭಾಗಗಳಲ್ಲಿ ಹಿರಿಯ ವ್ಯಾಪಾರಿಗಳು ಕೈಮೇಲೆ ಬಟ್ಟೆಯನ್ನು ಹಾಕಿ ಬೆರಳುಗಳ ಮೂಲಕ ವ್ಯಾಪಾರ ಕುದುರಿಸುವ ಹಳೆಯ ಪದ್ಧತಿಯಲ್ಲಿ ವ್ಯವಹಾರ ನಡೆಸುತ್ತಿದ್ದರೆ, ಇನ್ನು ಹಲವರು ಜೋರಾಗಿ ಕೂಗುವ ಮೂಲಕ ಬೆಲೆ ಕಟ್ಟಿ ವಾರಾಟ ವಾಡುತ್ತಿದ್ದರು.
ಇಸ್ಪೀಟ್ ಆಟ ಜೋರು:
ಯುಗಾದಿ ಹಬ್ಬದ ಹಿಂದೆಯೇ ಬರುವ ಹೊಸ್ತೊಡಕು ಹಬ್ಬ ಜೂಜಾಟಕ್ಕೆ ಪ್ರಸಿದ್ಧವಾಗಿದೆ, ಈ ಹಿಂದಿನಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ಹೆಚ್ಚು ಮಹತ್ವ ಇರುತ್ತದೆ, ಬಾಡೂಟ ಸವಿದು ಜೂಜಾಟದಲ್ಲಿ ತೊಡಗುವುದು ಈ ಹಬ್ಬದ ವಿಶೇಷ. ಜೂಜಾಟ ಕಾನೂನುಬಾಹಿರವಾಗಿರುವುದರಿಂದ ಇದಕ್ಕೆ ಅವಕಾಶವಿಲ್ಲ, ಆದರೂ ತೋಟಗಳಲ್ಲಿ, ಗುಪ್ತ ಜಾಗಗಳಲ್ಲಿ ಭರ್ಜರಿ ಜೂಜಾಟ ನಡೆಯುತ್ತದೆ. ಇನ್ನೂ ಕುಟುಂಬಸ್ಥರೇ ಸೇರಿಕೊಂಡು ಚೌಕಬಾರ ಸೇರಿ ಸಾಂಪ್ರದಾಯಿಕವಾಗಿ ಮನೆಗಳಲ್ಲೇ ಜೂಜಾಟ ಮಾಡುವುದು ಈ ಹಬ್ಬದ ವಿಶೇಷವಾಗಿದೆ.