

ಬೋರಗಾಂವ: ಲಾಕ್‌ಡೌನ್ ಪರಿಣಾಮದಿಂದಾಗಿ ನಿಪ್ಪಾಣಿ ಸೇರಿ ತಾಲೂಕಿನಲ್ಲಿ ವೀಳ್ಯದೆಲೆ ಬೆಳೆದ ರೈತರು ನಿತ್ಯ ಪರದಾಡುತ್ತಿದ್ದಾರೆ. ವೀಳ್ಯದೆಲೆಯನ್ನು ಮಾರುಕಟ್ಟೆಗೆ ಸಾಗಣೆ ಮಾಡಿದರೂ ವಿನಿಯೋಗಿಸಿದ ಹಣ ಸಹ ಮರಳಿ ಕೈ ಸೇರುತ್ತಿಲ್ಲ. ಇದು ರೈತನಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಣೆ ಮಾಡಲು ಅನುವು ಮಾಡಿಕೊಟ್ಟಿದೆ. ಆದರೆ, ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಅಗ್ಗದ ದರದಲ್ಲಿ ಖರೀದಿ ಮಾಡುತ್ತಿರುವುದು ನಷ್ಟಕ್ಕೆ ಕಾರಣವಾಗಿದೆ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕೆಂದರೆ ಮನೆಯಿಂದ ಯಾರೂ ಹೊರಬರುತ್ತಿಲ್ಲ. ಪಾನ್, ಬೀಡಾ ಅಂಗಡಿಗಳು ಬಂದ್ ಆಗಿರುವ ಕಾರಣ ಎಷ್ಟೋ ಜನ ವೀಳ್ಯದೆಲೆ ತಿನ್ನುವುದನ್ನೇ ಬಿಟ್ಟಿದ್ದಾರೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ತಾಲೂಕಿನ ನೇಜ, ನಾಗರಾಳ, ಖಡಕಲಾಟ, ಶಿರಗಾಂವ, ಶಿರಗಾಂವವಾಡಿ, ಜೈನಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ವಿಳ್ಯದೆಲೆ ಬೆಳೆದಿದ್ದಾರೆ. ನೆರೆಯ ಮಹಾರಾಷ್ಟ್ರ, ಸಾಂಗ್ಲಿ, ಗುಜರಾತ ವಿವಿಧ ಮಹಾನಗರಗಳಿಗೆ ರೈತರು ವೀಳ್ಯದೆಲೆಯನ್ನು ಮಾರಾಟಕ್ಕೆ ಕಳುಹಿಸಿಕೊಡುತ್ತಾರೆ. ಆದರೆ, ಲಾಕ್‌ಡೌನ್‌ನಿಂದಾಗಿ ಸದ್ಯ ಸಾಗಣೆಗೆ ಸಮಸ್ಯೆಯಾಗಿದೆ. ಹಾಗಾಗಿ ವೀಳ್ಯದೆಲೆ ಹೊಲದಲ್ಲಿಯೇ ಒಣಗುತ್ತಿದೆ.
ಲಾಕ್‌ಡೌನ್‌ನಿಂದಾಗಿ ವೀಳ್ಯದೆಲೆ ಉತ್ಪಾದಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ವೀಳ್ಯದೆಲೆಗೆ ಉತ್ತಮ ಬೆಲೆ ಬರುತ್ತಿತ್ತು. ಆದರೆ, ಕರೊನಾ ಎಫೆಕ್ಟ್‌ನಿಂದ ಈ ಬಾರಿ ನಾವು ನಷ್ಟ ಅನುಭವಿಸುವಂತಾಗಿದೆ. | ಚಂದ್ರಕಾಂತ ಯಾದವ, ರೈತ, ಖಡಕಲಾಟ
| ಸುಯೋಗ ಕಿಲ್ಲೇದಾರ ಬೋರಗಾಂವ