ಎಂಆರ್‌ಪಿಎಲ್‌ನಲ್ಲಿ ಎರೆಗೊಬ್ಬರ ಘಟಕ

mrpl
Published on

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ವಾರ್ಷಿಕ 90 ಟನ್ ಸಾಮರ್ಥ್ಯದ ವರ್ಮಿ ಕಾಂಪೋಸ್ಟ್(ಎರೆಹುಳಗೊಬ್ಬರ) ಘಟಕವನ್ನು ಪೆಟ್ರೋಲಿಯಂ ಖಾತೆ ಜತೆ ಕಾರ್ಯದರ್ಶಿ ಸುನೀಲ್ ಕುಮಾರ್ ಸೋಮವಾರ ಉದ್ಘಾಟಿಸಿದರು.

ಒಟ್ಟು ಮೂರು ಇಂತಹ ಘಟಕಗಳನ್ನು ನಿರ್ಮಿಸಲು ಯೋಜಿಸಿದ್ದು, ಅದರಲ್ಲಿ ಇದು ಮೊದಲನೆಯದ್ದು. ಒಟ್ಟು 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಂಆರ್‌ಪಿಎಲ್ ಒಟ್ಟು 2 ಸಾವಿರ ಎಕರೆ ಜಾಗದಲ್ಲಿ ಹರಡಿದ್ದು, ತರಗೆಲೆ, ಕತ್ತರಿಸಿದ ಹುಲ್ಲು, ತರಕಾರಿ ವೇಸ್ಟ್, ಕಾಗದ ಇತ್ಯಾದಿ ಸಿಗುತ್ತದೆ. ಪ್ರತಿವರ್ಷ 90 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದನ್ನು 24 ಟನ್ ಗೊಬ್ಬರವಾಗಿ ಮಾರ್ಪಡಿಸಲು ಕಂಪನಿ ಯೋಜನೆ ರೂಪಿಸಿದೆ. ಘನತ್ಯಾಜ್ಯವನ್ನು ಸುಸೂತ್ರವಾಗಿ ವಿಲೇವಾರಿಗೊಳಿಸುವುದಷ್ಟೇ ಅಲ್ಲ, ಅದರೊಂದಿಗೆ ಎಂಆರ್‌ಪಿಎಲ್ ತನ್ನ 500 ಎಕರೆ ಗ್ರೀನ್ ಬೆಲ್ಟ್ ಪ್ರದೇಶದಲ್ಲಿ ನೆಟ್ಟಿರುವ ಗಿಡಗಳಿಗೆ ಗೊಬ್ಬರವನ್ನೂ ಒದಗಿಸಬಹುದಾಗಿದೆ.

ವಿಶೇಷ ತಳಿಯ ಎರೆಹುಳ: ಯೂಡ್ರಿಲಸ್ ಯೂಜಿನಿಯಾ ಅಥವಾ ಆಫ್ರಿಕನ್ ನೈಟ್ ಕ್ರಾಲರ್ ಎಂಬ ವಿಶೇಷ ತಳಿಯ ಎರೆಹುಳವನ್ನು ಘಟಕದಲ್ಲಿ ಬಳಸಲಾಗುತ್ತಿದೆ. ಈ ಹುಳಗಳು ಬಹಳ ಬೇಗ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಕ್ಷಮತೆ ಪಡೆದಿದ್ದು, ಪ್ರತೀ ಹುಳವೂ ಪ್ರತಿದಿನ 4 ಕೆ.ಜಿ ತ್ಯಾಜ್ಯವನ್ನು ಗೊಬ್ಬರ ಮಾಡುತ್ತವೆ. ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್, ರಿಫೈನರಿ ನಿರ್ದೇಶಕ ಸಂಜಯ್ ವರ್ಮ, ಹಣಕಾಸು ನಿರ್ದೇಶಕ ಪೊಮಿಲ ಜಸ್ಪಾಲ್, ಮುಖ್ಯ ವಿಚಕ್ಷಣಾ ಅಧಿಕಾರಿ ರಾಜೀವ್ ಕುಶ್ವಾಹ, ಯೋಜನೆಗಳ ಕಾರ್ಯನಿರ್ವಾಹಕ ನಿರ್ದೇಶಕ ಇಳಂಗೊಮ, ಸಿಜಿಎಂ ಆಪರೇಶನ್ಸ್ ಯು.ವಿ.ಐತಾಳ್, ಸಿಜಿಎಂ ಎಚ್‌ಎಸ್‌ಇ ಎಂ.ಎಸ್.ಸುದರ್ಶನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net