

ಅಥಣಿ ಗ್ರಾಮೀಣ: ಸಂಘದಿಂದ ಸಾಲ ಪಡೆದ ರೈತರು ಸಕಾಲಕ್ಕೆ ಮರು ಪಾವತಿಸುವುದರಿಂದ ಸಂಘಗಳು ಆರ್ಥಿಕ ಸಬಲತೆ ಹೊಂದುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಪ್ರಗತಿ ವಿವಿದೋದ್ಧೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸದಸ್ಯರಿಗೆ ಬೆಳೆ ಸಾಲ ವಿತರಿಸಿ ಮಾತನಾಡಿ, ಸರ್ಕಾರ ಪಿಕೆಪಿಎಸ್ ಸಂಘದಿಂದ ಪಡೆದ ರೈತರ ಸಾಲದ ಬಡ್ಡಿಯನ್ನು ಕಟ್ಟುತ್ತದೆ. ಇದರ ಸದುಪಯೋಗ ಪಡೆದುಕೊಂಡು ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಸಂಘದಿಂದ ಒಟ್ಟು 293 ಸದಸ್ಯರಿದ್ದು, ಈಗ 193 ಸದಸ್ಯರಿಗೆ ಈಗ 1.87 ಕೋಟಿ ರೂ. ಸಾಲ ನೀಡಲಾಗಿದೆ.
ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಂಘದಿಂದ ಮುಂಬರುವ ದಿನಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ ವಿತರಣೆ ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು. ಸಂಘದ ಅಧ್ಯಕ್ಷ ಶಿವಾನಂದ ಖೋತ ಮಾತನಾಡಿ, ಸಂಘದಲ್ಲಿ ರಾಜಕೀಯ ಮಾಡದೇ ಶಾಸಕ ಲಕ್ಷ್ಮಣ ಸವದಿ ಅವರ ಸಹಕಾರ ಪಡೆದು ಸಂಘದ ಸದಸ್ಯರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ತಂದು ಶ್ರಮಿಸಲಾಗುವುದು ಎಂದರು.
ಮುಖಂಡರಾದ ಅಶೋಕ ನಾಯಿಕ, ತಮ್ಮಣ್ಣ ಖೋತ, ಪಾಂಡು ಭೋಸಲೆ, ರಾಜಾರಾಮ ಗಡದೆ, ಮುರಿಗೆಪ್ಪ ಬಾವಿ, ಸದಾಶಿವ ಗಲಗಲಿ, ಮಹಾದೇವ ನಾಯಿಕ ಇತರರಿದ್ದರು.