

ಮಡಿಕೇರಿ: ಮುಂಗಾರು ಸಂದರ್ಭ ರಸಗೊಬ್ಬರ ದಾಸ್ತಾನು ಮತ್ತು ಪೂರೈಕೆ ಸಮರ್ಪಕವಾಗಿರಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಸಗೊಬ್ಬರ ಕಂಪನಿ ಪ್ರತಿನಿಧಿಗಳು, ಸಹಕಾರ ಸಂಘಗಳು, ಕೃಷಿ ಪರಿಕರ ಮಾರಾಟ ಸಹಕಾರ ಸಂಘ ಪ್ರತಿನಿಧಿಗಳು ಮತ್ತಿತರ ಜೊತೆ ಮುಂಗಾರು ಸಂದರ್ಭದಲ್ಲಿ ರಸಗೊಬ್ಬರ ದಾಸ್ತಾನು ಸಂಬಂಧ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಗೆ ಪೂರೈಕೆಯಾಗುವ ರಸಗೊಬ್ಬರ ದಾಸ್ತಾನು ಮಾಡುವುದರ ಜೊತೆಗೆ, ಹೊರ ಜಿಲ್ಲೆಗೆ ರಸಗೊಬ್ಬರ ಸಾಗಾಣಿಕೆ ಮಾಡದಂತೆ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ಫೆಡರೇಷನ್ ಮತ್ತು ಬೀಜ ನಿಗಮದಿಂದ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳುವುದು. ಪ್ರಮುಖವಾಗಿ ಯೂರಿಯಾ ಮತ್ತು ಡಿಐಪಿ ರಸಗೊಬ್ಬರವನ್ನು ಬೇಡಿಕೆಯಂತೆ ದಾಸ್ತಾನು ಮಾಡಿಕೊಳ್ಳುವುದು, ಪ್ರತೀ ತಿಂಗಳು ಪೂರೈಕೆಯಾಗುವ ರಸಗೊಬ್ಬರ ಸಂಬಂಧ ಕಾಲ ಕಾಲಕ್ಕೆ ರಸಗೊಬ್ಬರ ಮಾರಾಟಗಾರರು ಹಾಗೂ ಕಂಪನಿ ಮತ್ತು ಸಹಕಾರ ಸೊಸೈಟಿಯವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ರಸಗೊಬ್ಬರ ಸಮರ್ಪಕವಾಗಿ ಸರಬರಾಜು ಆಗಬೇಕು. ಕೃಷಿಕರಿಂದ ಯಾವುದೇ ರೀತಿ ದೂರು ಬರದಂತೆ ರಸಗೊಬ್ಬರ ಮಾರಾಟಗಾರರು, ಕಂಪನಿಗಳು, ಸಹಕಾರ ಸಂಘಗಳು ಗಮನಹರಿಸಬೇಕು. ಎಲ್ಲಾ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಪಿಒಎಸ್ ಯಂತ್ರದಲ್ಲಿನ ದಾಸ್ತಾನು ಹಾಗೂ ವಾಸ್ತವಿಕ ಭೌತಿಕ ದಾಸ್ತಾನನ್ನು ತಾಳೆ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.
ರೈತರಿಗೆ ಯಾವುದೇ ರೀತಿಯ ಕಳಪೆ ರಸಗೊಬ್ಬರ ಸರಬರಾಜು ಆಗದಂತೆ ಎಲ್ಲಾ ರಸಗೊಬ್ಬರ ತಯಾರಿಕ ಸಂಸ್ಥೆ ಹಾಗೂ ಎಲ್ಲಾ ಖಾಸಗಿ ಮತ್ತು ಸಹಕಾರ ಸಂಘಗಳು ಎಚ್ಚರ ವಹಿಸಬೇಕು. ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ ರಸಗೊಬ್ಬರಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡುವುದನ್ನ ಪರಿಣಾಮಕಾರಿಯಾಗಿ ತಡೆಯುವ ಸಂಬಂಧ ಜಿಲ್ಲೆಯ ಗಡಿ ಭಾಗಗಳ ಚೆಕ್ ಪೋಸ್ಟ್‌ಗಳಲ್ಲಿ ಸೂಕ್ತ ತಪಾಸಣೆ ಕೈಗೊಳ್ಳಲು ಕ್ರಮವಹಿಸಬೇಕು. ಆ ನಿಟ್ಟಿನಲ್ಲಿ ಪೋಲೀಸ್ ಇಲಾಖೆಯ ಸಹಕಾರ ಪಡೆದುಕೊಳ್ಳಲು ಸಹ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರಗಳಿಗೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಸಕಾಲದಲ್ಲಿ ರೈತರಿಗೆ ರಸಗೊಬ್ಬರಗಳನ್ನು ದೊರೆಯುವಂತೆ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಕಚೇರಿಗೆ ಜಿಲ್ಲೆಗೆ ಸರಬರಾಜು ಮಾಡಲಾಗುವ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರ ಪ್ರಮಾಣದಲ್ಲಿ ಶೇ.೨೫ ರ?್ಟು ರಸಗೊಬ್ಬರಗಳನ್ನು ಕಾಪು ದಾಸ್ತಾನೀಕರಿಸಲು ಕೋರಲಾಗಿ, ಈ ಸಂಬಂಧ ಕೇಂದ್ರ ಕಚೇರಿಯಿಂದ ಪತ್ರ ಬಂದಿರುವುದಾಗಿ ಮಾಹಿತಿ ನೀಡಿದರು.
ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಹಾಕರ ಸಂಘ ಅಧ್ಯಕ್ಷರೊಬ್ಬರು ಮಾತನಾಡಿ, ಕಾಪು ದಾಸ್ತಾನೀಕರಿಸಿದ ರಸಗೊಬ್ಬರಗಳನ್ನು ಸಹಕಾರ ಸಂಘಗಳಿಗೆ ಹಂಚಿಕೆ ಮಾಡುವುದರ ಜೊತೆಗೆ ಖಾಸಗಿ ರಸಗೊಬ್ಬರ ಮಾರಾಟಗಾರರಿಗೂ ಹಂಚಿಕೆ ಮಾಡಿದರೆ ಸೂಕ್ತವೆಂದು ಕೋರಿದರು.
ಮುಂಬರುವ ಮುಂಗಾರು ಹಂಗಾಮಿನ ಪೂರ್ವದಲ್ಲಿ ಎಲ್ಲಾ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರಿಗೆ ಒಂದು ದಿನ ಕಾರ್ಯಗಾರ ಏರ್ಪಡಿಸಿ ಪಿಒಎಸ್ ಯಂತ್ರದ ಬಳಕೆ ಹಾಗೂ ಕೃಷಿ ಪರಿಕರಗಳ ಮಾರಾಟ ಕಾಯ್ದೆಗಳ ಬಗ್ಗೆ ಒಂದು ದಿನದ ತರಬೇತಿ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.
ದಾಸ್ತಾನು ವಿವರ
೨೦೨೪ರ ಮುಂಗಾರು ಸಂದರ್ಭದಲ್ಲಿ ಯೂರಿಯಾ ೧೯೩೬೬ ಮೆ.ಟ., ಡಿಎಪಿ ೭೫೦೧, ಎಂಒಪಿ ೧೫೮೮೪, ಕಾಂಪ್ಲೆಕ್ಸ್ ೩೪,೫೫೮,ಮತ್ತು ಎಸ್‌ಎಸ್‌ಪಿ ೩,೬೩೭ ಒಟ್ಟು ೮೦,೯೪೬ ಮೆಟ್ರಿಕ್ ಟನ್ ಬೇಡಿಕೆ ಇತ್ತು. ಅದೇ ರೀತಿ ಹಿಂಗಾರು ಸಂದರ್ಭದಲ್ಲಿ ಯೂರಿಯಾ ೫೩೦೭ ಮೆ.ಟಿ., ಡಿಎಪಿ ೧೭೦೯, ಎಂಒಪಿ ೫೦೪೭, ಕಾಂಪ್ಲೆಕ್ಸ್ ೬೪೮೬, ಎಸ್‌ಎಸ್‌ಪಿ ೫೮೪ ಒಟ್ಟು ೧೯,೧೩೩ ಮೆಟ್ರಿಕ್ ಟನ್ ಬೇಡಿಕೆ ಇತ್ತು. ಅದರಂತೆ ಪ್ರಸಕ್ತ ಸಾಲಿನಲ್ಲಿ ೯೯,೮೯೩ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಪೂರೈಕೆ ಆಗಿತ್ತು. ಇಲ್ಲಿಯವರೆಗೆ ಒಟ್ಟು ಲಭ್ಯತೆ ೧,೩೧,೫೦೨ ಮೆಟ್ರಿಕ್ ಟನ್ ಆಗಿದ್ದು, ೧,೦೪,೩೯೬ ಮೆ.ಟ.ರಸಗೊಬ್ಬರ ವಿತರಣೆಯಾಗಿದ್ದು, ೨೭,೧೦೬ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಉಳಿಕೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ವಿವರಿಸಿದರು.