

| ಕೀರ್ತಿನಾರಾಯಣ ಸಿ. ಬೆಂಗಳೂರು
ಮುಂಗಾರು ಪೂರ್ವ ಕೃಷಿ ಚಟುವಟಿಕೆ ರಾಜ್ಯದಲ್ಲಿ ಬಿರುಸುಗೊಂಡಿರುವ ಬೆನ್ನಲ್ಲೇ ರಸಗೊಬ್ಬರ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ. ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಬೇವು ಲೇಪಿತ ಯೂರಿಯಾವನ್ನು ರೈತರ ಹೆಸರಲ್ಲಿ ಖರೀದಿಸಿ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ನೆರೆರಾಜ್ಯಗಳ ಗಡಿ ಚೆಕ್ಪೋಸ್ಟ್ಗಳಲ್ಲಿ ನಿಗಾವಹಿಸಿ ಗೊಬ್ಬರ ಕಳ್ಳಸಾಗಾಟ ದಂಧೆಕೋರರ ವಿರುದ್ಧ ಎ್ಐಆರ್ ದಾಖಲಿಸುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ.
ಸಬ್ಸಿಡಿ ದರದ ಯೂರಿಯಾವನ್ನು ಮಧ್ಯ ವರ್ತಿಗಳು, ರೈತರು ಹಾಗೂ ರಸಗೊಬ್ಬರ ಮಾರಾಟ ಗಾರರಿಂದ ಪಡೆದು, ವಿವಿಧ ರಾಸಾಯನಿಕಗಳ ಹೆಸರಿನಲ್ಲಿ ಕೇರಳ, ತಮಿಳುನಾಡು ಸೇರಿ ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಯೂರಿಯಾ ಅಕ್ರಮ ದಾಸ್ತಾನು ಹಾಗೂ ಮಾರಾಟ ನಿಯಂತ್ರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಅವರು ಎಲ್ಲ ಜಿಲ್ಲಾ ಎಸ್ಪಿಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ. ಬೇವು ಲೇಪಿತ ಯೂರಿಯಾ 45 ಕೆ.ಜಿ ಚೀಲಕ್ಕೆ ಮಾರುಕಟ್ಟೆ ಬೆಲೆ 1666 ರೂ. ಇದೆ. ರಿಯಾಯಿತಿ ದರದಲ್ಲಿ 266 ರೂ.ಗೆ ರೈತರಿಗೆ ನೀಡಲಾಗುತ್ತಿದೆ. ಉಳಿದ 1400 ರೂ. ಅನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. ಆದರೆ, ರೈತರ ಹೆಸರಲ್ಲಿ ಆಧಾರ್ ಕಾರ್ಡ್ಗಳನ್ನು ಕೊಟ್ಟು ಯೂರಿಯಾ ಖರೀದಿಸುತ್ತಿರುವ ದಂಧೆಕೋರರು, ಹೊರರಾಜ್ಯಗಳಿಗೆ ಸಾಗಾಟ ಮಾಡಿ, ಬೇರೆಬೇರೆ ರಾಸಾಯನಿಕಗಳ ಹೆಸರಲ್ಲಿ ಹೆಚ್ಚಿನ ಬೆಲೆಗೆ ಅಂದಾಜು 2500 ರೂ.ನಿಂದ 3000 ರೂ.ಗೆ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈಗಾಗಲೇ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಗೊಬ್ಬರ ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿದ್ದು, ಐಪಿಸಿ ಸೆನ್ 420ರ ಅಡಿಯಲ್ಲಿ ಎ್ಐಆರ್ಗಳು ದಾಖಲಾಗಿವೆ. ನೇಪಾಳ ಹಾಗೂ ಬಾಂಗ್ಲಾದೇಶಕ್ಕೂ ಕಳ್ಳಸಾಗಣೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಕೈಗಾರಿಕೆಗಳ ವಿರುದ್ಧ ಕ್ರಮವಾಗಬೇಕು: ರಿಯಾಯಿತಿ ದರದಲ್ಲಿ ನೀಡುವ ಯೂರಿಯಾ ಗೊಬ್ಬರ ಕೃಷಿಯೇತರ ಚಟುವಟಿಕೆಗಳಿಗಾಗಿ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಅಕ್ರಮ ಖರೀದಿ ಪ್ರಕರಣಗಳಲ್ಲಿ ಸಿಕ್ಕೀಬಿಳುವ ಕೈಗಾರಿಕೆಗಳ ಪರ-ವಾನಗಿಯನ್ನು ರದ್ದುಗೊಳಿಸಬೇಕು. ಆಗ ಮಾತ್ರ ಯೂರಿಯಾ ರಸಗೊಬ್ಬರ ದುರುಪ-ಯೋಗ ತಡೆಯಬಹುದಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಪ್ರಕರಣಗಳು
1 ಮಾರ್ಚ್ನಲ್ಲಿ ಹಾವೇರಿಯಲ್ಲಿ ತಮಿಳುನಾಡು ಲಾರಿಯಲ್ಲಿ ಯೂರಿಯಾ ಸಾಗಾಟ ಮಾಡುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿದ್ದರು. ವಿವಿಧ ಡೀಲರ್ಗಳಿಂದ ಸಬ್ಸಿಡಿ ದರದಲ್ಲಿ 45 ಕೆಜಿ ತೂಕದ ಚೀಲ 300 ರೂ.ನಂತೆ ಖರೀದಿಸಿ, ನಂತರ ಕೈಗಾರಿಕೆಗಳಿಗೆ ಬಳಸುವ ಯೂರಿಯಾ ಚೀಲದಲ್ಲಿ ತುಂಬಿ ಚೀಲಕ್ಕೆ ಮಾರಾಟ ಮಾಡು ತ್ತಿದ್ದರು. 7.20 ಲ ಮೌಲ್ಯದ 700 ಚೀಲ ಜಪ್ತಿ ಮಾಡಲಾಗಿತ್ತು.
2 ಏಪ್ರಿಲ್ನಲ್ಲಿ ಕೊಡಗು ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಯೂರಿಯಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. 300 ಚೀಲ ಗೊಬ್ಬರ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರಿನ ಬಯ್ಯಪ್ಪನಹಳ್ಳಿ ಟ್ರೇಡರ್ಸ್ನ ಬಿಲ್ನಲ್ಲಿ ಯೂರಿಯಾ ಬದಲು ನೈಟ್ರೋಜಿಯಸ್ ಕೆಮಿಕಲ್ ಎಂದು ನಮೂದಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು.
26.76 ಲ ಮೆ.ಟನ್ ಬೇಡಿಕೆ
2022ನೇ ಸಾಲಿನ ಮುಂಗಾರು ಕೃಷಿ ಚಟುವಟಿಕೆಗೆ 26.76 ಲ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಏಪ್ರಿಲ್&ಮೇ ತಿಂಗಳಲ್ಲಿ 7,66,583 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಈಗಾಗಲೇ 3,64,330 ಮೆಟ್ರಿಕ್ ಟನ್ ಗೊಬ್ಬರ ರೈತರಿಗೆ ಪೂರೈಕೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿವಿಧೆಡೆ ದರ ಸುಲಿಗೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆ ಬಿರುಸುಗೊಂಡಿರುವ ಬೆನ್ನಲ್ಲೇ ಕೆಲವೆಡೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟದಲ್ಲಿ ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿವೆ. ಬೆಳಗಾವಿ ಸೇರಿ ವಿವಿಧೆಡೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿದೆ. ರೈತರು ಮುಂಗಡವಾಗಿ ಗೊಬ್ಬರ, ಬಿತ್ತನೆ ಬೀಜ ಖರೀದಿಸುತ್ತಿರುವುದರಿಂದ ದರ ಏರಿಕೆ ಕಂಡಿದೆ. ಕೊಪ್ಪಳದಲ್ಲಿ ಬೇಡಿಕೆ ತಕ್ಕ ದಾಸ್ತಾನು ಸಿಗುತ್ತಿಲ್ಲ. ಅಧಿಕ ದರಕ್ಕೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೆಲವೆಡೆ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ ಮಾರಾಟ ಮಾಡುತ್ತಿರುವುದಾಗಿ ದೂರು ಬಂದಿವೆ. ಶಿವಮೊಗ್ಗದಲ್ಲಿ ರಸಗೊಬ್ಬರ ಕೊರತೆ ಇದೆ. ಸಂಗ್ರಹವಿದ್ದರೂ ಮಾರಾಟಗಾರರು ನೋಸ್ಟಾಕ್ ಎನ್ನುತ್ತಿದ್ದಾರೆ. ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಅಗತ್ಯ ದಾಸ್ತಾನಿದೆ. ಉತ್ತರ ಕನ್ನಡದಲ್ಲೂ ಕೊರತೆ ಇಲ್ಲ . ಹಾಸನದ ಕೆಲವೆಡೆ ಹೆಚ್ಚುವರಿ ಹಣ ಪಡೆಯುತ್ತಿರುವ ಆರೋಪಗಳಿವೆ. ಮಂಡ್ಯ, ಕೊಡಗು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೊರತೆ ಭಾದಿಸಿಲ್ಲ. ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಹಣ ಪಡೆದು, ರಸೀದಿ ನೀಡುತ್ತಿಲ್ಲ. ದುಬಾರಿ ದರ ವಸೂಲಿ ಮಾಡುತ್ತಿರುವ ಆರೋಪವಿದೆ. ಕೋಲಾರದ ಕೆಲವೆಡೆ ನಕಲಿ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾರಾಟ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಖರೀದಿ ವಂಚನೆ ಹೇಗೆ? * ಸಬ್ಸಿಡಿ ಗೊಬ್ಬರ ಖರೀದಿಗೆ ಆಧಾರ್ ಕಾರ್ಡ್, ಕಿಸಾನ್ ಕ್ರೆಡಿಟ್ ಕಾರ್ಡ್ ಸಂಖ್ಯೆ ಕೊಡಬೇಕು * ಪಿಒಎಸ್ ಯಂತ್ರದಲ್ಲಿ ಖರೀದಿ ಪ್ರಮಾಣ, ಹೆಸರು, ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ * ರೈತರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಅಥವಾ ಸಂಖ್ಯೆಗಳನ್ನು ಕೊಟ್ಟು ಯೂರಿಯಾ ಖರೀದಿ * ಮಧ್ಯವರ್ತಿಗಳ ಜತೆ ಕೈಜೋಡಿಸಿ ಕಳ್ಳದಾರಿಯಲ್ಲಿ ಮಾರಾಟ ದಂಧೆಗಿಳಿದ ಚಿಲ್ಲರೆ ವ್ಯಾಪಾರಿಗಳು * ಗೊಬ್ಬರ ಖಾಲಿಯಾಗಿದೆ ಎಂದು ಲೆಕ್ಕ ತೋರಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಅಕ್ರಮ ಸಂಗ್ರಹ * ಅಕ್ರಮವಾಗಿ ದಾಸ್ತಾನು ಮಾಡಿಟ್ಟು, ಕೃತಕ ಅಭಾವ ಸೃಷ್ಟಿಸುವ ಮೂಲಕ ಹೆಚ್ಚು ಬೆಲೆಗೆ ಮಾರಾಟ
ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಯೂರಿಯಾವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಸಾಗಾಟ ಮಾಡು ವವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. | ಬಿ.ಸಿ. ಪಾಟೀಲ್ ಕೃಷಿ ಸಚಿವ
ಅಕ್ರಮ ಸಾಗಾಟ ಯಾಕೆ? * ಬೇವು ಲೇಪಿತ ಯೂರಿಯಾಗೆ ಇತ್ತೀಚೆಗೆ ಬೇಡಿಕೆ ಹೆಚ್ಚಳ, ಕೃಷಿಯೇತರ ಚಟುವಟಿಕೆಗಳಲ್ಲಿ ಬಳಕೆ * ಯೂರಿಯ ಸಂಗ್ರಹಿಸಿ, ಅದನ್ನು ಪುನ@ ವೈಾನಿಕವಾಗಿ ಕರಗಿಸಿ ದ್ರವರೂಪದಲ್ಲಿ ಪ್ಲೆವುಡ್ ತಯಾರಿಕಾ ಸಂಸ್ಥೆಗಳಿಗೆ ೆವಿಕಾಲ್ (ಗಮ್) ಆಗಿ ಬಳಸಲು ಸರಬರಾಜು * ಪಶು ಹಾಗೂ ಕೋಳಿ ಆಹಾರದಲ್ಲಿ ಪೋಟೀನ್ ಬದಲಾಗಿ ಯೂರಿಯಾ ರಸಗೊಬ್ಬರ ಬಳಕೆ * ರಾಗಿ ಮತ್ತು ಭತ್ತದ ಹುಲ್ಲಿಗೆ ಶೇ.1 ಯೂರಿಯಾವನ್ನು ನೀರಿನಲ್ಲಿ ಬೆರೆಸಿ, ಆ ಹುಲ್ಲನ್ನು ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿಟ್ಟರೆ ಸಾರಜನಕ ಪ್ರಮಾಣ ಹೆಚ್ಚುತ್ತದೆ. ಪಶುಗಳಿಗೆ ಉತ್ತಮ ಆಹಾರ * ಅತಿಯಾದ ಯೂರಿಯಾ ಬಳಕೆಯಿಂದ (ಶೇ.2ಕ್ಕಿಂತ ಹೆಚ್ಚು) ಪಶು ಆಹಾರ ವಿಷಕಾರಿಯಾಗಿ ಪರಿವರ್ತನೆ * ಹಾಲು ಕಲಬೆರಕೆ ದಂಧೆಕೋರರು, ಹಾಲು ಕಲಬೆರಕೆಗೆ ಯೂರಿಯಾ ಸೇರಿ ಇನ್ನಿತರ ರಾಸಾಯನಿಕ ಬಳಸುವುದು ಹೆಚ್ಚು * ಸಿಗರೇಟ್ನಲ್ಲಿ ಪರಿಮಳ ಹೆಚ್ಚಿಸಲು ಯೂರಿಯಾ ಮಿಶ್ರಣ * ಹೇರ್ ಕಂಡೀಷನರ್, ಬಾತ್ ಕ್ಲೀನರ್, ಬಾತ್ ಆಯಿಲ್, ಲೋಷನ್ನಲ್ಲೂ ಬಳಕೆ
ಜಾಗೃತಕೋಶ ಕಾರ್ಯಾಚರಣೆ
ಯೂರಿಯಾ ಅಕ್ರಮ ಸಾಗಾಟ ಜಾಲದ ವಿರುದ್ಧ ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವ ಕೃಷಿ ಇಲಾಖೆ ಜಾಗೃತ ಕೋಶದ ಅಧಿಕಾರಿಗಳು, ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ದಾಸ್ತಾನು ಹಾಗೂ ಮಾರಾಟ ಮಾಡುತ್ತಿದ್ದ ಡೀಲರ್ ಸಂಸ್ಥೆಗಳು ಹಾಗೂ ಮಾರಾಟಗಾರರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎ್ಐಆರ್ ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.