

ಶ್ರೀನಿವಾಸಪುರ: ರಾಜ್ಯದ ನಾನಾ ಭಾಗದಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರೈತರು ರೈತ ಸಂಪರ್ಕ ಕೇಂದ್ರ ಮತ್ತು ಖಾಸಗಿ ರಸಗೊಬ್ಬರ ಅಂಗಡಿಗಳ ಮುಂಭಾಗ ಸರದಿಯಲ್ಲಿ ನಿಂತು ಯೂರಿಯಾ ಮತ್ತೀತರೆ ಗೊಬ್ಬರ ಪಡೆಯುತ್ತಿದ್ದು, ಜಿಲ್ಲೆಯ ಶ್ರೀನಿವಾಸಪುರದಲ್ಲಿ ಯೂರಿಯಾಗೆ ನೂಕು ನುಗ್ಗಲು ಉಂಟಾಗುತ್ತಿದೆ. ಗೊಬ್ಬರದ ಲೋಡ್ ಬಂದ ಕೆಲವೇ ಕ್ಷಣಗಳಲ್ಲಿ ಖಾಲಿಯಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಗೊಬ್ಬರ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಅಲ್ಪ ಸ್ವಲ್ಪ ಮೆಳೆ ಬಿದ್ದಿದ್ದು, ರೈತರು ಸಾಲಸೋಲ ಮಾಡಿ ಒಂದಿಷ್ಟು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು, ಬಿತ್ತನೆ ಮಾಡಿದ ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಸಿಗದೆ ಪರದಾಡುವಂತಾಗಿದೆ.
ಇತ್ತೀಚಿಗೆ ರಾಯಲ್ಪಾಡು ಬಸ್ ನಿಲ್ದಾಣದಲ್ಲಿನ ಖಾಸಗಿ ಗೊಬ್ಬರ ಅಂಗಡಿಗೆ ಬಂದಿದ್ದ ರೈತರು ತಾ ಮುಂದು , ನಾ ಮುಂದು ಎನ್ನುವ ರೀತಿಯಲ್ಲಿ ಅಂಗಡಿಯ ಬಳಿ ಸಾಲಕಟ್ಟಿದ್ದ ದೃಶ್ಯ ಕಂಡು ಬಂದಿತ್ತು. ಯೂರಿಯಾ ಗೊಬ್ಬರ ಖರೀದಿಸಲು ಜನ ಮುಗಿಬಿದ್ದಿದ್ದರು. ಖಾಸಗಿ ರಸಗೊಬ್ಬರದ ಅಂಗಡಿ ಮಾಲೀಕರೊಬ್ಬರು ವ್ಯಾಪಾರಕ್ಕಾಗಿ ತರಿಸಿದ್ದ 230 ಯೂರಿಯಾ ಮೂಟೆಗಳು ಕೆಲವೇ ಗಂಟೆಗಳಲ್ಲಿ ಖಾಲಿಯಾಗಿ ಕೊನೆಗೆ ನಿಂತವರು ಗೊಬ್ಬರ ಸಿಗದೆ ವಾಪಸ್ಸಾದ ಪ್ರಸಂಗ ನಡೆದಿದೆ.
ಬಿತ್ತನೆ ಮಾಡಲಾಗಿದ್ದು, ಬಿಜೋತ್ಪತ್ತಿಗಾಗಿ ರಾಸಾಯನಿಕ ಗೊಬ್ಬರ ಅವಶ್ಯ ಇದೆ. ಮಾರುಕಟ್ಟೆಯಲ್ಲೂ ಗೊಬ್ಬರ ಸಿಗುತ್ತಿಲ್ಲ ಎಂದು ರೈತರೊಬ್ಬರು ಅಂಗಡಿ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಟ್ಟಣದಲ್ಲಿನ ಕೃಷಿ ಕೇಂದ್ರದಲ್ಲಿ ಅವಶ್ಯಕ್ಕೆ ತಕ್ಕಂತೆ ಗೊಬ್ಬರ ದಾಸ್ತಾನು ಇದ್ದು, ರಾಜ್ಯದ ಗಡಿ ಭಾಗದ ರಾಯಲ್ಪಾಡು, ನೆಲವಂಕಿ, ಗೌನಿಪಲ್ಲಿ ಗ್ರಾಮಗಳಲ್ಲಿ ಹೆಚ್ಚು ಬೇಡಿಕೆ ಇದೆ. ನೆರೆಯ ಆಂಧ್ರಪ್ರದೇಶದಲ್ಲಿ ಕಾಲುವೆಯ ಮೂಲಕ ಕೃಷ್ಣ ನದಿಯ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಅಲ್ಲಿನ ರೈತರು ವ್ಯವಸಾಯ ಮಾಡುತ್ತಿದ್ದು, ಅವರಿಗೂ ಯೂರಿಯಾ ಗೊಬ್ಬರವು ಸರಿಯಾಗಿ ಸಿಗದ ಕಾರಣ ಅಲ್ಲಿನ ರೈತರು ನಮ್ಮ ರಾಜ್ಯದ ರೈತರ ಮೂಲಕ ಯೂರಿಯಾ ಗೊಬ್ಬರ ಖರೀದಿಸಿಕೊಳ್ಳುತ್ತಿದ್ದ ಹಿನ್ನೆಲೆ ಈ ಮೂರು ಗ್ರಾಮಗಳಲ್ಲಿ ಯೂರಿಯಾ ಬೇಡಿಕೆ ಹೆಚ್ಚಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ.ಮಹೇಶ್ಬಾಬು ತಿಳಿಸಿದ್ದಾರೆ.
ಹೋಬಳಿ ಕೃಷಿ ಕೇಂದ್ರಕ್ಕೆ ಯೂರಿಯಾ ಬರುವುದಿಲ್ಲ. ಜಿಂಕ್, ಬೋರಾನ್ ಬರುತ್ತದೆ. ಕೃಷಿ ಕೇಂದ್ರಗಳಲ್ಲಿ ದಾಸ್ತಾನು ಇದ್ದು, ಹನಿ ನೀರಾವರಿ, ಕೃಷಿ ಯಂತ್ರಗಳಿಗೆ 5 ಎಕರೆ ಜಮೀನು ಇರುವ ರೈತರಿಗೆ ಶೇ.90 ಸಬ್ಸಿಡಿ ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಇತ್ತೀಚಿಗೆ ಅಲ್ಪ ಸ್ವಲ್ಪ ಮಳೆಯಾಗಿದ್ದು, ರೈತರು ಸಾಲಸೋಲ ಮಾಡಿ ಬಿತ್ತನೆ ಕಾರ್ಯ ಆರಂಭಿಸಿದ್ದು. ಸರಿಯಾಗಿ ಬೆಳೆಯದೆ ಇದ್ದ ಸಮಯದಲ್ಲಿ ಯೂರಿಯಾ ಗೊಬ್ಬರ ಹಾಕಬೇಕೆಂದು ಗೊಬ್ಬರ ಅಂಗಡಿಗಳಲ್ಲಿ ವಿಚಾರಿಸಿದಾಗ ಅಲ್ಲಿ ಸಿಗದೆ ದುಬಾರಿ ಬೆಲೆಗೆ ಗೊಬ್ಬರ ಖರೀದಿಸಿದ ಘಟನೆ ನಡೆದಿದೆ.
ರಸಗೊಬ್ಬರ ಬೇಕಾದಷ್ಟು ದಾಸ್ತಾನು ಇದೆ. ಯೂರಿಯಾ ಗೊಬ್ಬರ ಬಳಸುವುದಕ್ಕೆ ಇನ್ನು ಒಂದು ತಿಂಗಳು ಮೇಲೆ ಬೇಕಾಗಿದೆ. ಒಂದು ಯೂರಿಯಾ ಮೂಟೆ ಬೆಲೆ 262 ರೂ. ಅಷ್ಟೆ. ಆದರೆ ಖಾಸಗಿ ಅಂಗಡಿಗಳು 300 ರೂ. ಮಾರುತ್ತಿದ್ದು, ಗೌನಿಪಲ್ಲಿ ಅಂಗಡಿಯೊಂದರಲ್ಲಿ ಹೆಚ್ಚು ಬೆಲೆಗೆ ಮಾರುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಆ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಹೆಚ್ಚಿನ ಬೆಲೆಗೆ ಗೊಬ್ಬರ ಖರೀದಿಸಬಾರದು. ಸಾಧ್ಯವಾದಷ್ಟು ಕೃಷಿ ಇಲಾಖೆ ಮಾರ್ಗದರ್ಶನ ಪಡೆದು ವ್ಯವಸಾಯ ಮಾಡುವಂತೆ ಸಲಹೆ ನೀಡಿದರು.
- ಎಚ್.ಎಂ.ಮಹೇಶ್ ಬಾಬು
ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕೆಲವೇ ಗಂಟೆಯಲ್ಲಿ ಖಾಲಿ'
ಖಾಸಗಿ ರಸಗೊಬ್ಬರ ಅಂಗಡಿ ಮಾಲೀಕರೊಬ್ಬರು ವ್ಯಾಪಾರಕ್ಕಾಗಿ ತರಿಸಿದ್ದ 230 ಯೂರಿಯಾ ಮೂಟೆ ನೋಡಿ ರೈತರು ಒಬ್ಬರಿಗೊಬ್ಬರು ಮೊಬೈಲ್ ಮೂಲಕ ಕರೆ ಮಾಡಿಕೊಂಡು ಖಾಸಗಿ ರಸಗೊಬ್ಬರ ಅಂಗಡಿಯಲ್ಲಿ ಮೂಟೆ ಕೆಲವೇ ಗಂಟೆಯಲ್ಲಿ ಖಾಲಿಯಾಗಿರುವುದು ಕಂಡು ಬಂದಿದೆ.