ರಸಗೊಬ್ಬರ ಅಂಗಡಿ ಜಾಲಾಡಿದ ಅಧಿಕಾರಿಗಳು

dvd fertilizer shop
ದೇವದುರ್ಗದ ಖಾಸಗಿ ಫರ್ಟಿಲೈಸರ್ ಅಂಗಡಿಗೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ಕೃಷಿ ಅಧಿಕಾರಿಗಳಾದ ಶಿವರಾಜ, ಅರ್ಚನಾ, ಶ್ರೀಲತಾ ಇದ್ದರು.
Published on

ದೇವದುರ್ಗ: ಯೂರಿಯಾ ರಸಗೊಬ್ಬರ ಕೊರತೆ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ತಾಲೂಕಿನ ವಿವಿಧ ಫರ್ಟಿಲೈಸರ್ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದ ಕಾರಣ ಕೃಷಿ ಇಲಾಖೆ ಅಧಿಕಾರಿಗಳು ಬುಧವಾರ ಸಂಜೆ ಹಾಗೂ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ ನೇತೃತ್ವ ತಂಡ ಮೊದಲು ಟಿಎಪಿಸಿಎಂಎಸ್ ಕಚೇರಿಗೆ ತೆರಳಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ ನಡೆಸಿದರು. ಬಫರ್ಸ್ ಸ್ಟಾಕ್‌ನಿಂದ ಬಂದ ರಸಗೊಬ್ಬರ ರೈತರಿಗೆ ಹಂಚಿಕೆ ಮಾಡಬೇಕು. ಗೊಬ್ಬರ ಪಡೆಯುವ ರೈತರ ಆಧಾರ್‌ಕಾರ್ಡ್, ಪಹಣಿ ಪಡೆಯಬೇಕು. ನಿಯಮಪ್ರಕಾರ ಗೊಬ್ಬರ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.

ನಂತರ ಎಸ್.ಎಂ. ಅಗ್ರೋ ಏಜೆನ್ಸಿ, ಬಸವೇಶ್ವರ ಕೇಂದ್ರ, ಸೂಗೂರೇಶ್ವರ ಅಗ್ರೋ ಏಜೆನ್ಸಿ ಮತ್ತು ಬಸವ ಟ್ರೇಡರ್ಸ್ ಸೇರಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿನೀಡಿ ದಾಖಲೆ ಪರಿಶೀಲಿಸಿದರು. ಯೂರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಎಂಆರ್‌ಪಿ ಬೆಲೆಗೆ ಮಾರಾಟ ಮಾಡಬೇಕು.

ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕಠಿಣಕ್ರಮ ಕೈಗೊಳ್ಳಲಾಗುವುದು. ಗೊಬ್ಬರ ಇದ್ದರೆ ತೆಗೆದಿಟ್ಟು ಕೃತಕ ಅಭಾವ ಸೃಷ್ಟಿಸಬೇಡಿ. ರೈತರಿಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿಗಳ ಬಗ್ಗೆ ಅರಿವು ಮೂಡಿಸಿ ತೆಗೆದುಕೊಳ್ಳಲು ಸಲಹೆ ನೀಡಬೇಕು. ಗೊಬ್ಬರ ಜತೆಗೆ ಅನಗತ್ಯ ಔಷಧ ಜೋಡಿಸಿ ಮಾರಾಟ ಮಾಡಬೇಡಿ ಎಂದು ಎಚ್ಚರಿಸಿದರು.

ಯೂರಿಯಾ ರಸಗೊಬ್ಬರ ಕೊರತೆ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಬಗ್ಗೆ ವಿಜಯವಾಣಿ ಜು.23ರಂದು ‘ಯೂರಿಯಾ ಬಿಕ್ಕಟ್ಟು ಕೃಷಿಗೆ ಇಕ್ಕಟ್ಟು’ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರ ಪರಿಣಾಮ ಕೃಷಿ ಇಲಾಖೆ ಅಧಿಕಾರಿಗಳು ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ಕೃಷಿ ಅಧಿಕಾರಿಗಳಾದ ಶಿವರಾಜ, ಅರ್ಚನಾ, ಶ್ರೀಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net