

ಚಿಕ್ಕಬಳ್ಳಾಪುರ: ಆಂಧ್ರ ಗಡಿಭಾಗದಲ್ಲಿರುವ ಚೇಳೂರು, ಗುಡಿಬಂಡೆ, ಬಾಗೇಪಲ್ಲಿ ತಾಲೂಕುಗಳಿಗೆ ಬೇಡಿಕೆಗಿಂತ ಹೆಚ್ಚು ಯೂರಿಯಾ ಸರಬರಾಜು ಮಾಡಿದರೂ ಹಾಹಾಕಾರ ಸಮಸ್ಯೆ ರೈತರನ್ನು ಬಾಧಿಸುತ್ತಿದೆ.
ಹೌದು, ರಸಗೊಬ್ಬರ ಅಂಗಡಿಗಳ ಮುಂಭಾಗ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಕಾಯುವುದು, ಟೋಕನ್ ಪಡೆದುಕೊಂಡರೂ ಗೊಬ್ಬರ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ರೈತ ಸಂಘ ಸಂಸ್ಥೆಗಳು ಪ್ರತಭಟಿಸಿ ಆಕ್ರೋಶ ವ್ಯಕ್ತಪಡಿಸಿವೆ.
ಇದರ ನಡುವೆ ಸಮಸ್ಯೆ ಇತ್ಯರ್ಥಗೊಳ್ಳದ ಹಿನ್ನೆಲೆಯಲ್ಲಿ ವಿವಿಧ ಭಾಗಗಳ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಸಮಸ್ಯೆಗೆ ಪರಿಹಾರ ಕಲ್ಪಿಸುವ ತಂತ್ರಗಾರಿಕೆ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿರುವ ಜೋಳ, ನೆಲಗಡಲೆ ಸೇರಿದಂತೆ ಇತರೆ ಬೆಳೆಗಳಿಗೆ ಅಗತ್ಯವಿರುವಷ್ಟು ಯೂರಿಯಾ ಗೊಬ್ಬರವನ್ನು ಈಗಾಗಲೇ ಸರಬರಾಜು ಮಾಡಲಾಗಿದೆ, ಮತ್ತಷ್ಟು ಬೆಡಿಕೆಯಂತೆ ಅಧಿಕವಾಗಿ ೧೨೦೦ ಮೆಟ್ರಿಕ್ ಟನ್ ಯೂರಿಯೂ ಗೊಬ್ಬರವನ್ನು ಹೆಚ್ಚುವರಿಯಾಗಿ ಪೂರೈಸಿದ್ದು. ಅದರೂ ಇಲ್ಲಿನ ಬಹುತೇಕರು ರೈತರ ಸೋಗಿನಲ್ಲಿ ಆಂಧ್ರಪ್ರದೇಶದ ಕಾಳಸಂತೆಗೆ ಸಬ್ಸಿಡಿಯ ಯೂರಿಯೂ ಗೊಬ್ಬರವನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಯೂರಿಯೂ ಅಕ್ರಮ ಸಾಗಾಣಿಕೆಯನ್ನು ತಡೆಯುವ ಉದ್ದೇಶಕ್ಕಾಗಿ ಆಧಾರ್ ಕಾರ್ಡ್ ಜತೆಗೆ ಪಹಣಿ ನೊಂದಣಿ ಮಾಡಿಸಿಕೊಂಡು ಯೂರಿಯೂ ಪಡೆದುಕೊಳ್ಳುವ ಪದ್ದತಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಇದಕ್ಕೆ ರೈತರು ಸಹ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳ ಶಿಫಾರಸ್ಸಿನಂತೆ ಕೃಷಿ ಬೆಳೆಗಳಿಗೆ ಅಗತ್ಯವಿರುವಷ್ಟು ಮಾತ್ರ ಯೂರಿಯೂ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕಿ ಜಿ.ಆರ್.ಭವ್ಯರಾಣಿ, ವಿಜಲಿನ್ಸ್ ಎಡಿಎ ಪ್ರಮೋದ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್, ಸೊಸೈಟಿ ಅಧ್ಯಕ್ಷ ಚಂದ್ರಶೇಖರರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್.ಗೋವಿಂದರೆಡ್ಡಿ, ತಾಲೂಕು ಅಧ್ಯಕ್ಷ ವೆಂಕಟಶಿವಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಗುಮಾಸ್ತ ನಾರಾಯಣಸ್ವಾಮಿ ಇದ್ದರು.