ಮೂಟೆಗಟ್ಟಲೆ ಗೊಬ್ಬರ ಸಹಿತ ಬಾವಿಗೆ ಬಿದ್ದ ಲಾರಿ!!!

Untitled-1
Published on

ಉಡುಪಿ: ರಸ್ತೆ ಪಕ್ಕದ ನದಿಗೆ, ಕೆರೆಗೆ ಘನವಾಹನಗಳು ಬೀಳುವುದು ಹೊಸದೇನಲ್ಲ. ಆದರೆ ಇಲ್ಲೊಂದು ಕಡೆ ಲಾರಿಯೊಂದು ಬಾವಿಗೆ ಬಿದ್ದಿರುವಂಥ ಆಶ್ಚರ್ಯಕರ ಅಪಘಾತ ಸಂಭವಿಸಿದೆ. ಲಾರಿ ಬಾವಿಗೆ ಬಿದ್ದಿದೆ ಎಂದರೆ ಬರೀ ಮಾತಲ್ಲಿ ಹೇಳಿದರೆ ಯಾರಾದರೂ ಒಮ್ಮೆ ಅನುಮಾನದಿಂದ ನೋಡುವುದು ಸಹಜ. ಆದರೆ ಇಲ್ಲಿ ಲಾರಿ ಮಾತ್ರವಲ್ಲ, ಅದರೊಂದಿಗೆ ಮೂಟೆಗಟ್ಟಲೆ ಗೊಬ್ಬರ ಕೂಡ ಬಾವಿಪಾಲಾಗಿದೆ!

ಉಡುಪಿ ಜಿಲ್ಲೆಯ ಕಾರ್ಕಳದ ಟಿಎಪಿಎಂಸಿ ಬಳಿ ಚಾಲಕ ಹಾಗೂ ಕ್ಲೀನರ್​ ಇಬ್ಬರ ಅಜಾಗರೂಕತೆಯಿಂದಾಗಿ ಇಂಥದ್ದೊಂದು ಅಪಘಾತ ಸಂಭವಿಸಿದೆ. ಗೊಬ್ಬರ ತುಂಬಿದ್ದ ಲಾರಿಯನ್ನು ಚಾಲಕ ರಿವರ್ಸ್ ತೆಗೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಬಾವಿಗೆ ಹಿಂಭಾಗ ಜಾರಿದೆ. ಬಳಿಕ ಇಡೀ ಲಾರಿ ಮುಂಭಾಗ ಮೇಲ್ಮುಖವಾಗಿ ಬಾವಿಗೆ ಜಾರಿದ್ದು, 30 ಅಡಿ ಆಳದ ಬಾವಿಯೊಳಗೆ ಲಾರಿ ಸಿಲುಕಿಕೊಂಡಿದೆ.

ಈ ಲಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಸಗೊಬ್ಬರ ತುಂಬಿಕೊಂಡು ಬರಲಾಗಿತ್ತು. ಲಾರಿಯಲ್ಲಿದ್ದ ಒಟ್ಟು 1.36 ಲಕ್ಷ ಮೊತ್ತದ, 20 ಟನ್​ ಗೊಬ್ಬರ ಬಾವಿ ಪಾಲಾಗಿದೆ. ಚಾಲಕ ಹಾಗೂ ಕ್ಲೀನರ್ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net