ಬಾಳೆದಿಂಡಿನಿಂದ ಗೊಬ್ಬರ: ಐಡಿಯಾ ಸಿಕ್ಕಿದ್ದೇ ಪ್ರಧಾನಿ ಮೋದಿಯಿಂದ!

PM Modi
Published on

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಐಡಿಯಾವನ್ನು ಬಳಸಿಕೊಂಡು, ಹೊಸ ಉದ್ಯಮ ಶುರುಮಾಡಿ ಯಶಸ್ಸು ಗಳಿಸಿರುವ ಮಹಿಳೆಯನ್ನು ಸ್ವತಃ ಪ್ರಧಾನಿಯೇ ಮನ್ ಕಿ ಬಾತ್​ನಲ್ಲಿ ಶ್ಲಾಘಿಸಿದ್ದಾರೆ!

ಹೌದು. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ವರ್ಷಾ, ಬಾಳೆದಿಂಡು ತ್ಯಾಜ್ಯವನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವುದಷ್ಟೆ ಅಲ್ಲದೆ, ಇದರಲ್ಲಿ ಉಳಿಯುವ ತ್ಯಾಜ್ಯದಲ್ಲಿ ಗೊಬ್ಬರ ತಯಾರಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗೆ ಕಾರಣವಾಗಿದೆ. ಹಾಗಾಗಿ ವರ್ಷಾ ಹೆಸರನ್ನು ‘ಮನ್ ಕಿ ಬಾತ್’ 107ನೇ ಆವೃತ್ತಿಯಲ್ಲಿ ಪ್ರಸ್ತಾಪಿಸಿದ ಮೋದಿ, ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು ಎಂಬ ಮಹತ್ವದ ಸಂದೇಶ ಸಾರಿದರು.

ಮನ್ ಕಿ ಬಾತ್​ನಿಂದ ಪ್ರೇರಣೆಗೊಂಡಿರುವ ವರ್ಷಾ, ಬಾಳೆದಿಂಡಿನಿಂದ ಪೊಟ್ಯಾಷಿಯಂ ಗೊಬ್ಬರ, ನಾರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿದ್ದಾರೆ. ಈ ಮೂಲಕ ಐವರು ಮಹಿಳೆಯರು, ಇಬ್ಬರು ಪುರುಷರಿಗೆ ಕೆಲಸ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೆಂಗಿನಂತೆ ಬಾಳೆಯೂ ಬಹುಪಯೋಗಿ ಎಂಬುದನ್ನು ವರ್ಷಾ ತೋರಿಸಿಕೊಟ್ಟಿದ್ದಾರೆ. ಬಾಳೆಕಾಯಿ ಬಿಟ್ಟ ಮೇಲೆ ಗಿಡವನ್ನು ಕತ್ತರಿಸಿ ಹಾಕುತ್ತಾರೆ. ಕೆಲವರು ಜಮೀನಿನಲ್ಲೇ ಕೊಳೆಯಲು ಬಿಟ್ಟರೆ, ಮತ್ತೆ ಕೆಲವರು ತ್ಯಾಜ್ಯವೆಂದು ಎಸೆಯುತ್ತಾರೆ. ಇದನ್ನು ವರ್ಷಾ ಬಳಸಿಕೊಂಡು ಗೊಬ್ಬರ, ಕರಕುಶಲ ವಸ್ತುಗಳನ್ನು ತಯಾರಿಸಿ ಮಾದರಿಯಾಗಿದ್ದಾರೆ.

ಗೊಬ್ಬರ ತಯಾರಿ ಹೇಗೆ?

ಬಾಳೆದಿಂಡಿನಿಂದ ಚಾಪೆ ಮಾಡಲು ನಾರು ತೆಗೆದಾಗ ಬರುವ ರಸವನ್ನು ಶೇಖರಣೆ ಮಾಡಲಾಗುತ್ತಿದೆ. ಜತೆಗೆ, ಉಳಿದ ತ್ಯಾಜ್ಯವನ್ನು ಹಿಂಡಿದಾಗ ರಸ ಸಿಗುತ್ತಿದೆ. ಇದರಲ್ಲಿ ಪೊಟ್ಯಾಷಿಯಂ ಅಂಶ ಇದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಮಾರ್ಗದರ್ಶನ ಪಡೆದು ಸಾವಯವ ಪೊಟ್ಯಾಷಿಯಂ ಗೊಬ್ಬರವನ್ನು ವರ್ಷಾ ತಯಾರು ಮಾಡುತ್ತಿದ್ದಾರೆ. ಇನ್ನು ಬಾಳೆ ಸಿಪ್ಪೆಯಿಂದಲೂ ಗೊಬ್ಬರ ಸಿದ್ಧಪಡಿಸಿದ್ದಾರೆ. ಸದ್ಯಕ್ಕೆ ಈ ಗೊಬ್ಬರವನ್ನು ತಮ್ಮದೇ ಜಮೀನಿನ ಬೆಳೆಗಳಿಗೆ ಹಾಕುತ್ತಿರುವ ವರ್ಷಾ, ಅವರು ಮುಂದಿನ ದಿನಗಳಲ್ಲಿ ಪ್ಯಾಕೆಟ್ ಮಾಡಿ ಮಾರಾಟ ಮಾಡಬೇಕೆಂದು ಯೋಜನೆ ರೂಪಿಸಿಕೊಂಡಿದ್ದಾರೆ.

ಬಾಳೆ ಸಿಪ್ಪೆಯಿಂದ ಬರುವ ರಸವನ್ನು ಚೆಲ್ಲದೆ, ಸಂಗ್ರಹ ಮಾಡಿ ಪರೀಕ್ಷೆ ಮಾಡಿಸಿದಾಗ ಪೊಟ್ಯಾಷಿಯಂ ಅಂಶ ಇರುವುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಇದನ್ನು ಸಂಗ್ರಹಿಸಿ ಗೊಬ್ಬರ ಮಾಡಿದ್ದೇವೆ. ಈಗ ನಮ್ಮ ಬೆಳೆಗಳಿಗೆ ಬಳಕೆ ಮಾಡುತ್ತಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ವರ್ಷಾ.

ಎರಡು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ಕೇಳಿದ್ದೆ. ಆ ಸಂದರ್ಭದಲ್ಲಿ ತಮಿಳುನಾಡಿನ ಉದ್ಯಮಿ ಯೊಬ್ಬರ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. ಅವರ ಮಾತಿನ ಪ್ರೇರಣೆ ಯಿಂದ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ನಮ್ಮಲ್ಲಿನ ಸ್ಥಳೀಯ ವಸ್ತುಗಳನ್ನೇ ಬಳಸಿ ಕೊಂಡು ಕರಕುಶಲ ಉತ್ಪನ್ನಗಳನ್ನು ತಯಾರಿಸುತ್ತೇವೆ. ಪ್ರಧಾನಿ ಮೋದಿ ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದು ತುಂಬ ಖುಷಿ ನೀಡಿದೆ.

| ವರ್ಷಾ ಉದ್ಯಮಿ

ಐಡಿಯಾ ಸಿಕ್ಕಿದ್ದೇ ಪಿಎಂರಿಂದ...

ವರ್ಷಾ ಅವರಿಗೆ ಬಾಳೆದಿಂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಐಡಿಯಾ ಸಿಕ್ಕಿದ್ದೇ ಪಿಎಂ ಮೋದಿ ಅವರಿಂದ. ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿ ಗ್ರಾಮದ ನಿವಾಸಿ ಶ್ರೀಕಂಠಸ್ವಾಮಿ ಅವರನ್ನು ಎಂ.ಟೆಕ್ ಪದವೀಧರೆ ವರ್ಷಾ ವಿವಾಹವಾಗಿದ್ದಾರೆ. ಉಮ್ಮತ್ತೂರಿನಲ್ಲಿ 3 ಎಕರೆ ಜಮೀನು ಖರೀದಿ ಮಾಡಿ ಏನನ್ನಾದರೂ ಮಾಡಬೇಕು ಅಂದುಕೊಂಡು ಯೂಟ್ಯೂಬ್ ನೋಡುತ್ತಿದ್ದಾಗ ಪ್ರಧಾನಿ ಮೋದಿ ಅವರ ಹಿನ್ನೆಲೆ ಧ್ವನಿ ಇರುವ, ಬಾಳೆದಿಂಡಿನಿಂದ ಉತ್ಪನ್ನಗಳನ್ನು ತಯಾರಿಸುತ್ತಿರುವ ವಿಡಿಯೋ ಸಿಕ್ಕಿದೆ. ಅಲ್ಲದೆ, ಈ ಹಿಂದೆ ಮನ್ ಕಿ ಬಾತ್​ನಲ್ಲಿ ಮೋದಿ, ತಮಿಳುನಾಡಿನಲ್ಲಿ ಬಾಳೆಯಿಂದ ಉತ್ಪನ್ನ ತಯಾರಿಸುತ್ತಿರುವ ಉದ್ಯಮಿಯೊಬ್ಬರ ಬಗ್ಗೆ ಪ್ರಸ್ತಾಪಿಸಿದ್ದರು.

ಇದರಿಂದ ಪ್ರೇರಣೆಗೊಂಡ ವರ್ಷಾ ಗೂಗಲ್​ನಲ್ಲಿ ಹುಡುಕಾಟ ನಡೆಸಿ, ತಮಿಳುನಾಡಿಗೆ ಪತಿಯೊಂದಿಗೆ ಹೋಗಿ ಬಾಳೆದಿಂಡಿನ ಉತ್ಪನ್ನಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸುವುದನ್ನು ಪತ್ತೆ ಮಾಡಿದರು. ಅಲ್ಲಿ ಅಧ್ಯಯನ ನಡೆಸಿ, ಯಂತ್ರೋಪಕರಣ ಖರೀದಿಸಿ ಉಮ್ಮತ್ತೂರಿನಲ್ಲಿ 2ರಿಂದ 3 ಲಕ್ಷ ರೂ. ಬಂಡವಾಳ ಹಾಕಿ ಆಕೃತಿ ಇಕೋ ಫ್ರೆಂಡ್ಲಿ ಎಂಟರ್ ಪ್ರೖೆಸಸ್ ಹೆಸರಿನಲ್ಲಿ ಹೊಸದಾಗಿ ಉದ್ಯಮ ಶುರು ಮಾಡಿದರು.

ಯಾವ್ಯಾವ ಉತ್ಪನ್ನ ತಯಾರಿ

ಬಾಳೆದಿಂಡಿನಿಂದ ಕಪ್, ಚಾಪೆ, ಬಳೆ ಇನ್ನಿತರ ವಸ್ತುಗಳನ್ನು ವರ್ಷಾ ತಯಾರಿಸುತ್ತಿದ್ದಾರೆ. ಉದ್ಯಮ ಶುರು ಮಾಡಿದ ಆರಂಭಿಕ ದಿನಗಳಲ್ಲಿ ತಮಿಳುನಾಡಿಗೆ ನಾರಿನಿಂದ ತಯಾರಿಸಿದ ಚಾಪೆಗಳನ್ನು ಮಾರಾಟ ಮಾಡುತ್ತಿದ್ದರು. ದಿನ ಕಳೆದಂತೆ ಸ್ಥಳೀಯವಾಗಿಯೂ ಮಾರುಕಟ್ಟೆಯನ್ನು ವಿಸ್ತರಿಸಿದರು. ಚಾಮರಾಜನಗರ, ಮೈಸೂರು ಸೇರಿ ವಿವಿಧ ಕಡೆಗಳಲ್ಲಿ ನಡೆಯುವ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲೂ ತಮ್ಮ ಉತ್ಪನ್ನಗಳನ್ನು ಮಾರುತ್ತಿದ್ದಾರೆ.

ಕೃಷಿ ಮೇಳದಲ್ಲಿ ಕಮಾಲ್

‘ವಿಜಯವಾಣಿ’ ಕಳೆದ ವರ್ಷ ಮೈಸೂರಿನಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ವರ್ಷಾ ಅವರ ಬಾಳೆದಿಂಡಿನ ಉತ್ಪನ್ನಗಳು ಕಮಾಲ್ ಮಾಡಿದ್ದವು. ವರ್ಷಾ ಅವರು ಮೇಳದಲ್ಲಿ ಮಳಿಗೆ ಹಾಕಿದ್ದರು. ಜನರು ಇದನ್ನು ಆಸಕ್ತಿಯಿಂದ ಗಮನಿಸಿ, ಬಾಳೆದಿಂಡಿನ ನಾರಿನಿಂದ ತಯಾರಿಸಿರುವ ವಸ್ತುಗಳೆಂದು ಅಚ್ಚರಿಯಿಂದ ನೋಡಿದ್ದರು. ಖರೀದಿಯನ್ನೂ ಮಾಡಿ ಸಂತಸ ಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net