

ಸವಣೂರ: ಹಳ್ಳಿಗಳ ಪಾನ್‌ಶಾಪ್‌ಗಳಲ್ಲಿ ಮದ್ಯ ದೊರೆಯುತ್ತಿದೆ. ಆದರೆ, ರೈತರು ಗೊಬ್ಬರ, ಬೀಜಕ್ಕಾಗಿ ಪರದಾಡುವಂತಾಗಿದೆ ಎಂದು ರೈತರು ಶಾಸಕ ಯಾಸೀರಖಾನ್ ಪಠಾಣ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಸೋಮವಾರ ನಡೆದಿದೆ.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಡಿಎಪಿ ಗೊಬ್ಬರ ಕೇಂದ್ರ ಸರ್ಕಾರದ ಯೋಜನೆಯಡಿ ದೊರೆಯುತ್ತದೆ. ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಕೇಳಿದಲ್ಲಿ ನಾನು ಮಾತನಾಡಬಹುದು ಎಂದು ಶಾಸಕರು ಹೇಳಿದರು. ಇದರಿಮದ ಆಕ್ರೋಶಗೊಂಡ ರೈತರು, ಶಾಸಕರಾಗಿ ನೀವು ಯಾವಾಗಾದರೂ ರೈತರ ಗೋಳು ಕೇಳಿದ್ದೀರಾ? ಎಂದು ವಾಗ್ವಾದಕ್ಕಿಳಿದರು. ತಕ್ಷಣ ಎಚ್ಚೆತ್ತ ಶಾಸಕರು, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಉಪ ವಿಭಾಗಾಧಿಕಾರಿ ಸಭಾ ಭವನದಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಅಹವಾಲು ಸ್ವೀಕಾರ ಹಾಗೂ ಸಮಸ್ಯಗಳ ಪರಿಹಾರಕ್ಕೆ ಸಭೆ ಆಯೋಜಿಸಲಾಗುವುದು. ರೈತರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ನಂತರ, ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪುರಸಭೆ ಅಧ್ಯಕ್ಷ ಅಲ್ಲಾವುದೀನ್ ಮನಿಯಾರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ರೈತ ಸಂಘಟನೆಗಳ ಪದಾಧಿಕಾರಿಗಳಾದ ಶಿವಾನಂದ ಯಲಿಗಾರ, ಚನ್ನಪ್ಪ ಮರಡೂರ, ಸಂಗಮೇಶ ಪೀತಾಂಬ್ರಶೆಟ್ಟಿ, ಅಬ್ದುಲ್ ಬುಡಂದಿ, ನಾಗರಾಜ ಬಂಕಾಪೂರ ಇತರರಿದ್ದರು.
ಶಾಸಕ ಯಾಸೀರಖಾನ್ ಪಠಾಣ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಡಿಎಪಿ ಗೊಬ್ಬರ ಕುರಿತು ಕೇಳಿದರೆ ಸಂಸದರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ನಾನು ಬರುತ್ತೇನೆ ಎಂದರು. ಹೀಗಾಗಿ ರೈತರು ಮತ್ತು ಶಾಸಕರ ನಡುವೆ ವಾಗ್ವಾದ ನಡೆಯಿತು. ಮೇ 27ರಂದು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಭೆ ನಂತರ ಮುಂದಿನ ಕ್ರಮಕ್ಕೆ ತೀರ್ಮಾನಿಸಲಾಗುವುದು. ಚನ್ನಪ್ಪ ಮರಡೂರ, ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಬಿತ್ತನೆ ಬೀಜ ಕೊರತೆ ಇಲ್ಲ. ಡಿಎಪಿ ಗೊಬ್ಬರ ಸರಬರಾಜು ನಿಧಾನಗತಿಯಲ್ಲಿದ್ದು, ಅದರ ಬದಲಾಗಿ ಬೇರೆ ಬೇರೆ ಕಾಂಪ್ಲೆಕ್ಸ್ ಬಳಕೆಗಾಗಿ ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಆದರೆ, ದರ ಹೆಚ್ಚಳದಿಂದ ರೈತರಲ್ಲಿ ಗೊಂದಲ ಮೂಡಿದೆ. ಸವಿತಾ ಚಕ್ರಸಾಲಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ