ರಾಸಾಯನಿಕ ಗೊಬ್ಬರಗಳಿಂದ ಭೂಮಿ ಬರಡು

28 RPT 1
ರಿಪ್ಪನ್‌ಪೇಟೆ ಸಮೀಪದ ಕೋಡೂರಿನ ಅಡಕೆ ತೋಟದಲ್ಲಿ ರೈತರು ಹಾಗೂ ಇರುವಕ್ಕಿ ಕೃಷಿ ವಿವಿಯ ವಿದ್ಯಾರ್ಥಿಗಳು ಸಂವಾದ ನಡೆಸಿದರು.
Published on

ರಿಪ್ಪನ್‌ಪೇಟೆ: ರಾಸಾಯಿನಿಕ ಗೊಬ್ಬರಗಳಿಂದ ತಾತ್ಕಾಲಿಕ ಇಳುವರಿ ಹೆಚ್ಚಾಗಬಹುದು, ಆದರೆ ಮುಂದಿನ ದಿನಗಳಲ್ಲಿ ಮಣ್ಣಿನ ಲವತ್ತತೆ ಕಡಿಮೆಯಾಗಿ ಭೂಮಿ ಬರಡಾಗುತ್ತದೆ ಎಂದು ಕೃಷಿ ವಿವಿ ಪ್ರಾಧ್ಯಾಪಕ ಡಾ. ರವಿಶಂಕರ್ ಹೇಳಿದರು.

ಕೋಡೂರು ಅಡಕೆ ತೋಟದಲ್ಲಿ ಗ್ರಾಮದ ರೈತರು ಹಾಗೂ ಇರುವಕ್ಕಿ ಕೃಷಿ ವಿವಿಯ ಗಂಧದಗುಡಿ ವಿದ್ಯಾರ್ಥಿಗಳ ತಂಡ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ರೈತರು ರಾಸಾಯಿನಿಕ ಗೊಬ್ಬರ ಬಳಸದೆ ಸಾವಯವ ಹಾಗೂ ಜೈವಿಕ ಗೊಬ್ಬರಗಳನ್ನು ಬಳಸಬೇಕು ಎಂದರು.
ಜೈವಿಕ ಗೊಬ್ಬರಗಳ ಪ್ರಭಾವ ನಿಧಾನ ಗತಿಯಲ್ಲಿದ್ದರೂ ಇಳುವರಿಯನ್ನು ಹೆಚ್ಚಿಸಿ ಮಣ್ಣಿನ ಲವತ್ತತೆ ಕಾಪಾಡುತ್ತದೆ. ಕೃಷಿ ತ್ಯಾಜ್ಯ ಕೊಳೆಯುವಿಕೆಯಲ್ಲಿ ಸಹಾಯ ಮಾಡಿ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡುತ್ತದೆ. ಆದ್ದರಿಂದ ವಿವಿ ತೋಟಗಾರಿಕಾ ಇಲಾಖೆಗಳಿಂದ ದೊರೆಯುವ ಜೈವಿಕ ಗೊಬ್ಬರಗಳನ್ನು ಬಳಸಬೇಕು ಎಂದು ತಿಳಿಸಿದರು.
ಡಾ. ಸಚಿನ್ ಮಾತನಾಡಿ, ಬೇರುಹುಳುಗಳು ತೇವಾಂಶ ಹೆಚ್ಚಾದರೆ ಮಣ್ಣಿನ ಮೇಲ್ಭಾಗದಲ್ಲಿ ಹಾಗೂ ತೇವಾಂಶ ಕಡಿಮೆಯಾದರೆ ಕೆಳಭಾಗದಲ್ಲಿರುತ್ತವೆ. ಮಣ್ಣನ್ನು ಅಗೆದು ಸಡಿಲಗೊಳಿಸಿ ಬೇರುಹುಳುಗಳನ್ನು ಸಂಗ್ರಹಿಸಿ ನಾಶಮಾಡಬೇಕು ಎಂದರು. ಅಡಕೆ, ಬಾಳೆ, ತೆಂಗು ಬೆಳೆಗಳ ಅಂತರ ಸಾಂಸ್ಕೃತಿ ಕ್ರಮಗಳ ಬಗ್ಗೆ ಹಾಗೂ ಜಿಂಕ್, ಬೋರಾನ್ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದಾಗುವ ರೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಪ್ರಾಧ್ಯಾಪಕಿ ರಶ್ಮಿ ಅಡಕೆ ಸಿಪ್ಪೆಯಿಂದ ಗೊಬ್ಬರ ತಯಾರಿಕೆ, ಅದರ ಮಹತ್ವ, ತಯಾರಿಸುವ ವಿಧಾನ, ಸಿಪ್ಪೆ ಗೊಬ್ಬರದ ಪೋಷಕಾಂಶಗಳು, ಕೊಟ್ಟಿಗೆ ಗೊಬ್ಬರ ಹಾಗೂ ಸಿಪ್ಪೆ ಗೊಬ್ಬರದ ವ್ಯತ್ಯಾಸದ ಕುರಿತು ಮಾಹಿತಿ ನೀಡಿತು. ಚಿಕ್ಕಜೇನಿಯ ಸಿಹಿಜೇನು ತಂಡ, ಮಾರುತಿಪುರ ನವಗ್ರಹ ತಂಡ ಆಯಾ ಗ್ರಾಮದಲ್ಲಿ ರೈತರಿಗೆ ಜಾಗೃತಿ ಮೂಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net