ಬೆಂಗಳೂರಿಗೆ ಬರಲಿವೆ ಮಹಿಳಾ ಪೊಲೀಸ್​ ಗೊಂಬೆಗಳು: ನಗರದಲ್ಲಿ ಕಾನೂನು ಪಾಲನೆಗೆ ಹೊಸ ಉಪಾಯ

lady police
Published on

ಬೆಂಗಳೂರು: ಸಾರ್ವಜನಿಕರು ರಸ್ತೆ ನಿಯಮ ಪಾಲಿಸುವಂತೆ ಮಾಡಲು ಇತ್ತೀಚೆಗೆ ಬೆಂಗಳೂರು ಟ್ರಾಫಿಕ್​ ಪೊಲೀಸರು ಹೊಸ ಉಪಾಯವೊಂದನ್ನು ಮಾಡಿದ್ದರು. ನಗರದ ಪ್ರಮುಖ ಸಿಗ್ನಲ್​ಗಳಲ್ಲಿ ಟ್ರಾಫಿಕ್​ ಪೊಲೀಸ್​ ಗೊಂಬೆಗಳನ್ನು ನಿಲ್ಲಿಸಿ ತಮ್ಮ ಉಪಸ್ಥಿತಿ ಇರುವಂತೆ ಮಾಡಿದ್ದರು. ಇದೀಗ ಬೆಂಗಳೂರು ಪೊಲೀಸ್​ ಮತ್ತೊಂದು ಉಪಾಯ ಮಾಡಿದ್ದು ನಗರದಲ್ಲಿ ಮಹಿಳಾ ಪೊಲೀಸರ ಗೊಂಬೆಗಳನ್ನು ಇಟ್ಟು ಜನರಲ್ಲಿ ಭಯವಿರುವಂತೆ ಮಾಡಲು ಹೊರಟಿದ್ದಾರೆ.

ಬೆಂಗಳೂರಿನಲ್ಲಿ ಮಹಿಳಾ ಪೊಲೀಸ್​ ಗೊಂಬೆಗಳನ್ನು ಇರಿಸುವಂತೆ ಬೆಂಗಳೂರು ಪೊಲೀಸರ ಮುಖ್ಯಸ್ಥ ಭಾಸ್ಕರ್​ ರಾವ್​ ಆದೇಶ ಹೊರಡಿಸಿದ್ದಾರೆ. ಜನರು ಪೊಲೀಸರು ಕಣ್ಣೆದುರಿದ್ದರೆ ಮಾತ್ರ ತಪ್ಪು ಮಾಡುವುದಕ್ಕೆ ಭಯ ಪಡುತ್ತಾರೆ, ಆಗ ಮಾತ್ರ ಕಾನೂನು ಪಾಲನೆ ಮಾಡುತ್ತಾರೆ ಎನ್ನುವ ಕಾರಣದಿಂದ ಮಹಿಳಾ ಪೊಲೀಸ್​ ಗೊಂಬೆಗಳನ್ನಿಡುವ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯುವಂತೆ ಈ ಪೊಲೀಸ್​ ಗೊಂಬೆಗಳನ್ನು ನಿರ್ಮಿಸಲಾಗುವುದು. ಯಾವ ಪ್ರದೇಶದಲ್ಲಿ ಗೊಂಬೆಗಳನ್ನಿಡಬೇಕು, ಯಾವ ರೀತಿಯಲ್ಲಿ ನಿಯೋಜನೆ ಮಾಡಬೇಕು ಎನ್ನುವ ಕೆಲಸವನ್ನು ನಗರದ ಪೊಲೀಸ್​ ಉಪ ಆಯುಕ್ತರು ಮತ್ತು ಸಹಾಯಕ ಪೊಲೀಸ್​ ಆಯುಕ್ತರಿಗೆ ವಹಿಸಲಾಗಿದೆ.

ಸದ್ಯ ಬೆಂಗಳೂರಿನಲ್ಲಿ ಎಷ್ಟು ಪೊಲೀಸ್​ ಗೊಂಬೆಗಳ ನಿಯೋಜನೆ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗಿಲ್ಲ. ಯಾವ ಯಾವ ಸ್ಥಳದಲ್ಲಿ ಅವಶ್ಯಕತೆ ಇನ್ನುವುದನ್ನು ಗುರುತಿಸಿ ಅದರ ಸಂಖ್ಯೆಯನ್ನು ತಿಳಿಸುವಂತೆ ಕಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಬೆಂಗಳೂರಿನ ಪೊಲೀಸ್​ ಕಮಿಷನರ್​ ಕಚೇರಿಯಲ್ಲಿ ಒಂದು ಮಹಿಳಾ ಪೊಲೀಸ್​ ಗೊಂಬೆಯನ್ನು ಇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net