

ಬೇಲೂರು: ನಮ್ಮೆಲ್ಲರಿಗೂ ತಾಯಿಯಾಗಿ, ತಂಗಿಯಾಗಿ, ಗೆಳತಿಯಾಗಿ ಹೆಣ್ಣು ಬೇಕು. ಆದರೆ ಅದೇ ಹೆಣ್ಣು ಮಗುವನ್ನು ಸ್ವೀಕರಿಸಲು ಮನಸ್ಸು ಒಪ್ಪದೆ ಹೆಣ್ಣು ಭ್ರೂಣ ಹತ್ಯೆಯನ್ನು ಮಾಡುತ್ತಿರುವುದು ವಿಷಾದದ ಸಂಗತಿ ಎಂದು ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದೇಶಭಕ್ತರ ಬಳಗ ಹಾಗೂ ಸ್ಪಂದನ ಸಿರಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೋಟೆ ಪ್ರೈಮರಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಮತಿ ಅಹಲ್ಯಬಾಯಿ ಹೋಳ್ಕರ್ ನಮ್ಮ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಗಟ್ಟಿಯಾದ ನಿಲುವು ತಾಳಿ, ಕಾಶಿ ಮುಂತಾದ ದೇವಾಲಯಗಳ ಪುನರುತ್ಥಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಂತೆ ಇಂದಿನ ಮಹಿಳೆಯರು ಸಹ ಮುಂದಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಬಹಳ ವೇಗವಾಗಿ ಮುನ್ನುಗ್ಗುತ್ತಿದ್ದರೂ ಅವರ ಮೇಲೆ ಎಲ್ಲ ಕ್ಷೇತ್ರದಲ್ಲೂ ಶೋಷಣೆ ನಡೆಯುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು.
ಬಳಗದ ಕಾರ್ಯದರ್ಶಿ ಮೆಡಿಕಲ್ ಮಹೇಶ್ ಮಾತನಾಡಿ, ಶಿಂಧೆ ಮನೆತನದಲ್ಲಿ ಹುಟ್ಟಿದ ಅಹಲ್ಯಾಬಾಯಿ ಹೋಳ್ಕರ್ ತನ್ನ ಬೇಜವಾಬ್ದಾರಿ ಪತಿಯಿಂದಾಗಿ ಹಲವಾರು ಸಂಕಷ್ಟಕ್ಕೊಳಗಾದರೂ ರಾಜ್ಯಭಾರವನ್ನು ತನ್ನ ಕೈಗೆತ್ತಿಕೊಂಡು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮಹತ್ತರವಾದ ದೇಣಿಗೆ ಮತ್ತು ಕಾಣಿಕೆಯನ್ನಿತ್ತ ಧೀಮಂತ ಮಹಿಳೆ. ಅವರ ಹೆಸರಿನ ಪ್ರಶಸ್ತಿಯನ್ನು ಸ್ಪಂದನ ಸಿರಿ ವೇದಿಕೆಯ ಜಿಲ್ಲಾಧ್ಯಕ್ಷೆ ಆಶಾ ಕಿರಣ್ ಅವರ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿರುವ ಸೇವೆ ಪರಿಗಣಿಸಿ ನೀಡಿ ಗೌರವಿಸುತ್ತಿದ್ದೇವೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಶಾ ಕಿರಣ್, ಪಾಲಕರು ತಮ್ಮ ಮಕ್ಕಳು ಅಂಕ ಗಳಿಸಬೇಕು ಎಂಬ ಆಸೆಯ ಜತೆಗೆ ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದರು.
ಸ್ಪಂದನ ಸಿರಿ ತಾಲೂಕು ಅಧ್ಯಕ್ಷೆ ಪ್ರತಿಭಾಮಯ್ಯ, ಕಾರ್ಯದರ್ಶಿ ಸುಮಾ, ಇಸಿಒ ಶಿವಪ್ಪ, ಗಾಯಕಿ ಶೋಭಾ ಹರೀಶ, ಶಿಕ್ಷಕರಾದ ಮಾರುತಿ, ಶಾಲೆಯ ಸಿಬ್ಬಂದಿ ಇದ್ದರು.