ಮೆಗ್ಗಾನ್ ಆಸ್ಪತ್ರೆ ಶೌಚಗೃಹದ ಕಮೋಡ್‌ನಲ್ಲಿ ಹೆಣ್ಣು ಭ್ರೂಣ ಪತ್ತೆ

Mcggan hospital
ಮೆಗ್ಗಾನ್ ಆಸ್ಪತ್ರೆ
Published on

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್‌ನ ಶೌಚಗೃಹದ ಕಮೋಡ್‌ನಲ್ಲಿ ಬುಧವಾರ ರಾತ್ರಿ ನವಜಾತ ಶಿಶುವಿನ ಹೆಣ್ಣು ಭ್ರೂಣ ಪತ್ತೆಯಾಗಿದೆ.

ಸುಮಾರು 7 ತಿಂಗಳ ಹೆಣ್ಣು ಭ್ರೂಣ ಅದಾಗಿದ್ದು ಆಸ್ಪತ್ರೆ ಡಿ ಗ್ರೂಪ್ ಸಿಬ್ಬಂದಿ ರಾತ್ರಿ ಶೌಚಗೃಹಕ್ಕೆ ತೆರಳಿದ್ದ ವೇಳೆ ಕಮೋಡ್‌ನಲ್ಲಿ ಭ್ರೂಣ ಪತ್ತೆಯಾಗಿದೆ.

ಬುಧವಾರ ಸಂಜೆ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಆಗಮಿಸಿದ ಮಹಿಳೆಯೊಬ್ಬರು ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಮನೆಯಲ್ಲಿಯೇ ಅಬಾರ್ಷನ್ ಆಗಿದೆ ಎಂದು ಹೇಳಿ ದಾಖಲಾಗಿದ್ದರು. ಆ ಮಹಿಳೆಗೆ ಸೂಕ್ತ ವೈದ್ಯೋಪಚಾರವನ್ನು ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ತನದಂತರ ಮಹಿಳೆಯು ಯಾರಿಗೂ ತಿಳಿಸದೆ ಆಸ್ಪತ್ರೆಯಿಂದ ಹೊರಗೆ ತೆರಳಿದ್ದಾಳೆ. ಈ ವೇಳೆ ಮಹಿಳೆ ಹೆಸರು, ನೀಡಿದ ಚಿಕಿತ್ಸೆ ಮತ್ತೀತರ ವಿವರ ಒಳಗೊಂಡ ಕೇಸ್ ಶೀಟ್ ಅನ್ನೂ ಕೊಂಡೊಯ್ದಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಯಾರು ಈ ಕೃತ್ಯ ನಡೆಸಿದ್ದಾರೆಂಬುವುದು ಇನ್ನಷ್ಟೆ ತಿಳಿದುಬರಬೇಕಿದೆ. ಹೆರಿಗೆ ವಾರ್ಡ್‌ನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net