

ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಹೆಣ್ಣು ಭ್ರೂಣ ಹತ್ಯೆಗೆ ಕಾರಣರಾಗಿರುವ ಪಾಲಕರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.
ಇದರಿಂದ ತಮ್ಮ ಒಡಲಲ್ಲಿ ಚಿಗುರೊಡೆದಿದ್ದ ಪುಟ್ಟ ಕಂದಮ್ಮಗಳನ್ನು ಹತ್ಯೆಗೈಯುತ್ತಿದ್ದ ಪಾಲಕರಿಗೂ ಇದೀಗ ಕಂಟಕ ಎದುರಾಗಲಿದೆ.
ಹೆಣ್ಣೂ ಭ್ರೂಣ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ. ಇದು ವೈದ್ಯರು ಮಾತ್ರವಲ್ಲ, ಪಾಲಕರ ವಿರುದ್ಧವೂ ಈ ಆರೋಪದ ಮೇಲೆ ಕಾನೂನು ಕ್ರಮಕೈಗೊಳ್ಳಬಹುದು. ಆದಾಗ್ಯೂ ಹೆಣ್ಣು ಭ್ರೂಣ ಎಂದು ತಿಳಿದು, ಅವುಗಳನ್ನು ಗರ್ಭಪಾತ(ಹತ್ಯೆ) ಮಾಡಿಸಿದ ಪಾಲಕರಿಗೂ ಅಷ್ಟೇ ಪ್ರಮಾಣದ ಶಿಕ್ಷೆ ಆಗಲಿದೆ. ಹೀಗಾಗಿ ಮೂರು ವರ್ಷಗಳಲ್ಲಿ ಸಾವಿರಾರು ಹೆಣ್ಣು ಭ್ರೂಣಗಳ ಪತ್ತೆ ಹಚ್ಚಿ ಗರ್ಭಪಾತ ಮಾಡಿಸಿದ ಪ್ರಕರಣದ ಕಿಂಗ್‌ಪಿನ್‌ಗಳಾದ ಮೈಸೂರಿನ ಆಯುರ್ವೇದಿಕ್ ವೈದ್ಯ ಚಂದನ್ ಬಲ್ಲಾಳ್, ಮಕ್ಕಳ ತಜ್ಞ ತುಳಸಿರಾಮ್ ಸೇರಿ ೯ ಮಂದಿಯನ್ನು ಬಂಧಿಸಲಾಗಿದೆ. ಜತೆಗೆ ಹೆಣ್ಣು ಭ್ರೂಣ ಪತ್ತೆ ಹಚ್ಚಿಸಿ, ಗರ್ಭಪಾತ ಮಾಡಿಸಿಕೊಂಡ ಪಾಲಕರ ಮಾಹಿತಿ ಸಂಗ್ರಹಿಸಲಾಗಿದೆ. ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿರುವ ರಿಜಿಸ್ಟ್ರಾರ್ ಪುಸ್ತಕ ಮತ್ತು ಕಂಪ್ಯೂಟರ್ ಹಾಗೂ ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳಲ್ಲಿ ಅಂದಾಜು ೧೦೦ಕ್ಕೂ ಅಧಿಕ ಪಾಲಕರ ಮಾಹಿತಿ ದೊರಕಿದೆ. ಇನ್ನುಳಿದ ಪಾಲಕರ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.
ಬಂಧಿತ ಇಬ್ಬರು ವೈದ್ಯರು ಸೇರಿ ೯ ಮಂದಿ ಆರೋಪಿಗಳು ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಿದ್ದರು ಎಂಬುದರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಆಧಾರದ ಮೇಲೆ ಸದ್ಯದಲ್ಲೇ ಕೆಲ ಪಾಲಕರಿಗೆ ನೋಟಸ್ ನೀಡಲಾಗುತ್ತದೆ. ಕಾನೂನು ಸಲಹೆ ಪಡೆದು ಗರ್ಭಪಾತ ಮಾಡಿಸಿಕೊಂಡ ಪಾಲಕರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು ಅಥವಾ ಅವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ಪತ್ರೆ ನೋಂದಣಿಯಾಗಿರಲಿಲ್ಲ:
ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆಯ ಕೆಪಿಎಂಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷನ್‌ಮೆಂಟ್) ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿಲ್ಲ. ಜತೆಗೆ ಐದು ತಿಂಗಳಿಂದ ಈ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿರಲ್ಲಿಲ್ಲ. ಈ ಆಸ್ಪತ್ರೆಯನ್ನು ಸ್ಥಗಿತಗೊಳಿಸಿ ಮೈಸೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ಮತ್ತೊಂದು ಆಯುರ್ವೇದಿಕ್ ಆಸ್ಪತ್ರೆಯನ್ನು ತೆರೆದುಡಾ.ಚಂದನ್ ಬಲ್ಲಾಳ್ ಅಕ್ರಮ ದಂಧೆ ಮುಂದುವರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ಸಂಖ್ಯೆ ಮತ್ತಷ್ಟು ಹೆಚ್ಚಳ:
ಬಂಧಿತ ಆರೋಪಿಗಳು ಕಳೆದ ಮೂರು ವರ್ಷದ ಅವಧಿಯಲ್ಲಿ ಸುಮಾರು ೯ ಸಾವಿರ ಹೆಣ್ಣು ಭ್ರೂಣ ಹತ್ಯೆ ಮಾಡಿದ್ದರು ಎನ್ನಲಾಗಿತ್ತು. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸಿದ್ದಾಗ ಸುಮಾರು ೧.೫ ಲಕ್ಷ ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳ ಕೃತ್ಯಕ್ಕೆ ಕೆಲ ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತೆಯರು ಜೈ ಜೋಡಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.