ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ನಿವೃತ್ತ ಸೈನಿಕ

1020
Published on

ಚಿಕ್ಕೋಡಿ: ದಸರಾ ಹಬ್ಬದಲ್ಲಿ ತಿನಿಸು ಕೊಡಲು ಹೋದ ಪತ್ನಿಯ ತಂದೆಯನ್ನೇ ನಿವೃತ್ತ ಸೈನಿಕ ಕೊಲೆ ಮಾಡಿದ ದಾರುಣ ಘಟನೆ ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಕರೋಶಿ ಗ್ರಾಮದ ಸಿದ್ದಪ್ಪ ರಾಯಪ್ಪ ಖೋತ(58) ಕೊಲೆಯಾದ ವ್ಯಕ್ತಿ. ಇಟ್ನಾಳ ಗ್ರಾಮದ ನಿವೃತ್ತ ಸೈನಿಕ ಬಾಳೇಶ ಶ್ರೀಕಾಂತ ಬೋರಣ್ಣವರ(38) ಕೊಲೆ ಆರೋಪಿ.

ಕೊಲೆಯಾದ ಸಿದ್ದಪ್ಪ ಖೋತ ತನ್ನ ಪುತ್ರಿಯನ್ನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಟ್ನಾಳ ಗ್ರಾಮದ ಬಾಳೇಶ ಬೋರಣ್ಣವರ ಅವರಿಗೆ 10 ವರ್ಷಗಳ ಹಿಂದೆಯಷ್ಟೇ ಮದುವೆ ಮಾಡಿಕೊಟ್ಟಿದ್ದರು. ತಮಗೆ ಮಕ್ಕಳಾಗಿಲ್ಲವೆಂದು ಬಾಳೇಶ ಬೋರಣ್ಣನವರ ಪದೇ ಪದೆ ಪತ್ನಿ ಜತೆ ಜಗಳ ಮಾಡುತ್ತಿದ್ದ. ದಸರಾ ಹಬ್ಬದ ನಿಮಿತ್ತ ಮಗಳಿಗೆ ಪರಾಳ ಕೊಡಲು ಇಟ್ನಾಳ ಗ್ರಾಮಕ್ಕೆ ಸಿದ್ದಪ್ಪ ಹೋಗಿದ್ದರು.

ಮಕ್ಕಳಾಗಿಲ್ಲ ಎಂಬ ವಿಷಯ ಇಟ್ಟುಕೊಂಡು ನಿವೃತ್ತ ಸೈನಿಕ ಪತ್ನಿ ಜತೆ ತೆಗೆದ ಜಗಳ ವಿಕೋಪಕ್ಕೆ ಹೋಗಿದೆ. ಜಗಳ ಬಿಡಿಸಲು ಹೋದ ಸಿದ್ದಪ್ಪನ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಕೂಡಲೇ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿದ್ದಪ್ಪ ಮೃತಪಟ್ಟಿದ್ದಾನೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net