ಅರಣ್ಯ ಭೂಮಿಯಲ್ಲಿ ಚಿತ್ರೀಕರಣಕ್ಕೆ ಮರ ಕಡಿತ; ಪ್ರಕರಣ ದಾಖಲಿಸಲು ಸಚಿವರ ಸೂಚನೆ

Ishwar Khandre
Published on

ಬೆಂಗಳೂರು: ಎಚ್‌ಎಂಟಿ ವಶದಲ್ಲಿರುವ ಅರಣ್ಯಭೂಮಿಯಲ್ಲಿ ಚಿತ್ರೀಕರಣದ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೇ ನೂರಾರು ಮರ ಕಡಿದಿರುವುದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿರುವ ಅವರು, ಎಚ್‌ಎಂಟಿ ತನ್ನ ವಶದಲ್ಲಿರುವ ಅರಣ್ಯ ಭೂಮಿಯನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನಿಡುತ್ತಿರುವುದನ್ನು ಗಮನಿಸಲಾಗಿದೆ. ಇನ್ನು ಕೆನರಾ ಬ್ಯಾಂಕ್‌ಗೆ ಎಚ್‌ಎಂಟಿ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಹೆಸರಿನ ಚಲನಚಿತ್ರಕ್ಕಾಗಿ ಹಲವು ತಿಂಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಲಾಗಿದೆ. ಇದಕ್ಕಾಗಿ ಅಲ್ಲಿದ್ದ ನೂರಾರು ಮರ,ಗಿಡ ಕಡಿಯಲಾಗಿದೆ. ಅನುಮತಿ ಇಲ್ಲದೇ ಮರ ಕಡಿಯುವುದು ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ, ಗಿಡ ಅಕ್ರಮ ಕಡಿತಲೆ ದಂಡನೀಯ ಅಪರಾಧ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನು ಪಡೆದು ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೆ? ಅನುಮತಿ ಕೊಟ್ಟಿದ್ದರೆ ಅರಣ್ಯ ಭೂಮಿಯಲ್ಲಿ ಮರ ಕಡಿತಲೆ ಅನುಮತಿ ನೀಡಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಅನುಮತಿ ಇಲ್ಲದೇ ಮರ ಕಡಿತಲೆ ಮಾಡಿದ್ದಲ್ಲಿ ಅದಕ್ಕೆ ಕಾರಣರಾದವರ ವಿರುದ್ಧ ಅರಣ್ಯ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net