

ಮಡಿಕೇರಿ: ಮೂರ್ನಾಡುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಡಗು ಕೊಯವ ಸಮಾಜದ ೨೦೨೧-೨೨ನೇ ಸಾಲಿನ ೧೭ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತರಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಸಮಾಜದ ಅಧ್ಯಕ್ಷ ಜಿಲ್ಲಂಡ ಮಾದಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜದ ದತ್ತಿನಿಧಿಯಡಿಯಲ್ಲಿ ನೀಡಲಾಗುವ ಪ್ರೋತ್ಸಾಹ ಧನವನ್ನು ೨೦೨೧-೨೨ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಕಳ್ಳಿರ ಲೀಷ್ಮಾ, ಪುದಿಯೊಕ್ಕಡ ರೇಷ್ಮಾ, ದ್ವಿತೀಯ ಪಿಯುಸಿಯಲ್ಲಿ ಮೇಚಿರ ದೀಪ್ತಿ, ಅಚ್ಚಪಂಡ ವರ್ಷ, ಪದವಿಯಲ್ಲಿ ತೋರೆರ ಯಾಶಿಕಾ, ಸುಳ್ಳೇರಾ ನೀಮಾ ಪಡೆದುಕೊಂಡರು.
ಸ್ನಾತಕೋತ್ತರ ಪದವಿ ಮುಗಿಸಿದ ಜಿಲ್ಲಂಡ ಅರ್ಪಿತ(ಮಾಸ್ಟರ್ ಆಫ್ ಫಾರ್ಮಸಿ), ಕಳ್ಳಿರ ಪವನ್ (ಎಂ.ಬಿ.ಎ), ಮುಕ್ಕಾಟಿರ ಅಮೃತ ಬೋಪಯ್ಯ (ಎಂ.ಸಿ.ಎ) ಅವರಿಗೆ ಮೇಚೂರ ಲೋಕೇಶ್, ಮಮತ ದಂಪತಿಗಳ ಪ್ರಾಯೋಜಕತ್ವದಲ್ಲಿ ಪ್ರೋತ್ಸಾಹ ಧನ ನೀಡಲಾಯಿತು. ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಮೂವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಮೇಚಿರ ಡಾ.ಜ್ಞಾನ ಮಣಿ ನಾಣಯ್ಯ, ಯಾವ ಕ್ಷೇತ್ರವಾದರು ಅದು ಶ್ರೇಷ್ಟವಾಗಿರುತ್ತದೆ. ಆ ಕ್ಷೇತ್ರವನ್ನು ಆಸಕ್ತಿಯಿಂದ ಅಧ್ಯಯನ ಮಾಡಿದರೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ದೇಶದ ರಕ್ಷಣಾ ಕ್ಷೇತ್ರದಲ್ಲಿ ಸುಮಾರು ೩೧ ವರ್ಷ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿರುವ ಕಾಂಞಂಗಡ ದೇವಯ್ಯ ಮಾತನಾಡಿ, ಇಂದಿನ ಯುವ ಪೀಳಿಗೆ ದೇಶದ ಸಂಪತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಲೇಖಕಿ, ನಟಿ, ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ, ಕೊಡವ ಭಾಷೆ, ಪದ್ಧತಿ, ಪರಂಪರೆ, ಆಚಾರ-ವಿಚಾರ, ಐನ್ ಮನೆ, ಮುಂದ್ ಮನೆ ಇವುಗಳೆಲ್ಲವೂ ಕೊಡವರ ಮತ್ತು ಕೊಡವ ಭಾಷಿಕರ ಜೀವನ ಪದ್ಧತಿಯಲ್ಲಿ ಹಾಸು ಹೊಕ್ಕಾಗಿ ಬಂದಿರುವ ಮೂಲ ಸಂಸ್ಕೃತಿಯಾಗಿದೆ. ಇಂತಹ ವಿಚಾರಗಳನ್ನು ಜಗತ್ತಿಗೆ ಸಿನಿಮಾಗಳ ಮೂಲಕ ತಿಳಿಸುವ ಕಾರ್ಯವನ್ನು ಹತ್ತು ಹಲವು ವರ್ಷಗಳಿಂದ ಕೊಡವ ಸಿನಿಮಾ ರಂಗದ ದಿಗ್ಗಜರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಸಾಲಿನಲ್ಲಿ ನಾಡಪೆದ ಆಶಾ ಎನ್ನುವ ಕೊಡವ ಸಂಸ್ಕೃತಿಯಾಧಾರಿತ ಕೊಡವ ಸಿನಿಮಾವನ್ನು ನಿರ್ಮಾಣ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿ ಸಫಲರಾಗಿದ್ದೇವೆ. ನಮ್ಮ ಶ್ರಮವನ್ನು ಗುರುತಿಸಿ ನನ್ನನ್ನು ಸನ್ಮಾನಿಸಿರುವುದರಿಂದ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಮಾಜದ ಹಿರಿಯ ನಿರ್ದೇಶಕ ಮುಕ್ಕಾಟಿರ ಹ್ಯಾರಿ ಪೂಣಚ್ಚ ಉದ್ಘಾಟಿಸಿದರು. ಮಡಿಕೇರಿ ಫೀಲ್ಡ್ ಮಾರ್ಷಲ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು ಹಾಗೂ ಕೊಡವ ಭಾಷೆ ಸ್ನಾತಕೋತ್ತರ ವಿಭಾಗದ ಸಂಯೋಜಕ ರವಿಶಂಕರ್ ನಾಣಯ್ಯ, ಸಮಾಜದ ಗೌರವ ಕಾರ್ಯದರ್ಶಿ ತೋರೆರ ಕಾರ್ಯಪ್ಪ, ಸಮಾಜದ ಉಪಾಧ್ಯಕ್ಷ ಮೇಚಿರ ಡಾ.ಸುಭಾಷ್ ನಾಣಯ್ಯ, ನಿರ್ದೇಶಕ ಮಲ್ಲಂಡ ಮಹೇಶ್, ಪ್ರಮುಖರಾದ ಮೇಚೂರ ಮಮತಾ ಲೋಕೇಶ್, ಕಾಂಞಂಗಡ ಡಿಂಪಲ್ ದೇಚಮ್ಮ, ಕಳ್ಳಿರ ನಾಣಯ್ಯ ಇತರರಿದ್ದರು.
ಇದೇ ಸಂದರ್ಭದಲ್ಲಿ ಕೈಲು ಮುಹೂರ್ತ ಸಂತೋಷ ಕೂಟದಲ್ಲಿ ವೈವಿಧ್ಯಮಯ ಆಟೋಟ, ಕೊಡವ ಹಾಡುಗಳ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.