

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರ ಪ್ರಾಯೋಜಿತ ಕೆಲವು ಯೋಜನೆಗಳು ನಿರೀಕ್ಷಿತ ಪ್ರಗತಿಯಾಗಿಲ್ಲ. ವ್ಯವಸ್ಥೆಯ ದೋಷ ಹಾಗೂ ಜನರ ಮಾನಸಿಕತೆ ಯೋಜನೆಗಳ ಅನುಷ್ಠಾನಕ್ಕೆ ತೊಡಕಾಗಿದೆ .ಇಂತಹ ವ್ಯವಸ್ಥೆಗಳ ಶುದ್ದೀಕರಣ ಜನಪ್ರತಿನಿಧಿಯ ಜವಾಬ್ದಾರಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾರಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸುತ್ತೇನೆ. ಸಮರ್ಪಕವಾದ ಪೂರ್ವ ತಯಾರಿ ಇಲ್ಲದ ಕಾರಣ ಅನುಷ್ಠಾನ ಹಂತದಲ್ಲಿ ಯೋಜನೆಯ ಕಾಮಗಾರಿಗಳು ವಿಳಂಬವಾಗುತ್ತಿವೆ. ಸಮಗ್ರವಾಗಿ ಯೋಜನೆ ರೂಪಿಸುವುದು ಇದಕ್ಕೆ ಪರಿಹಾರ ಎಂದರು.
ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ವೇಳೆಗೆ ಮಂಗಳೂರಿನ ಕದ್ರಿಯ ಯುದ್ಧ ಸ್ಮಾರಕವನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಉತ್ತಮವಾಗಿ ಅಭಿವೃದ್ಧಿಪಡಿಸಬೇಕು. ಮಂಗಳೂರಿನಲ್ಲಿ ಸೈನಿಕ ಶಾಲೆ ತೆರೆಯಲು ಪ್ರಯತ್ನ ಆಗಬೇಕಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಸೇವಕರಾದರೆ, ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲೆಯ ಜನರ ಪ್ರಧಾನ ಸೇವಕರಾಗಿ ಅಭಿವೃದ್ಧಿಗೆ ದುಡಿಯಲಿದ್ದಾರೆ. ನಗರದ ನಂತೂರು, ಕೆಪಿಟಿ ಮೇಲ್ಸೆತುವೆ ನಿರ್ಮಾಣ , ಬಿಕರ್ನಕಟ್ಟೆ- ಸಾಣೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಿದೆ ಎಂದರು.
ಮನಪಾ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಕಾರ್ಪೋರೇಟರ್‌ಗಳಾದ ವರುಣ್ ಚೌಟ, ಶ್ವೇತಾ ಪೂಜಾರಿ, ದಿವಾಕರ ಪಾಂಡೇಶ್ವರ, ಕಿರಣ್‌ಕುಮಾರ್ ಕೋಡಿಕಲ್, ಸಂಗೀತಾ ನಾಯಕ್, ಶಶಿಧರ ಹೆಗ್ಡೆ ನವೀನ್ ಡಿಸೋಜ, ಭಾಸ್ಕರ ಮೊಯಿಲಿ, ಜಗದೀಶ ಶೆಟ್ಟಿ, ಎ.ಸಿ. ವಿನಯರಾಜ್ ನೂತನ ಸಂಸದರನ್ನು ಅಭಿನಂದಿಸಿ ಮಾತನಾಡಿ, ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಗಮನಕ್ಕೆ ತಂದರು.
ಉಪ ಮೇಯರ್ ಸುನೀತಾ, ಮನಪಾ ಆಯುಕ್ತ ಆನಂದ್ ಉಪಸ್ಥಿತರಿದ್ದರು. ಶರಣ್ ವಂದಿಸಿದರು. ಮಂಜುಳಾ ಶೆಟ್ಟಿ
ಕಾರ್ಯಕ್ರಮ ನಿರೂಪಿಸಿದರು.