

ಭದ್ರಾವತಿ: ಜಗತ್ತಿನಲ್ಲಿ ಕುರುಬ ಸಮುದಾಯಕ್ಕೆ ಇರುವ ಪಾವಿತ್ರ್ಯ, ಗೌರವ, ಘನತೆ ಬೇರೆ ಯಾವ ಸಮುದಾಯಕ್ಕೂ ಇಲ್ಲ ಎಂದು ದಾರ್ಶಿನಿಕರೇ ಹೇಳಿರುವಾಗ, ಕುರುಬರಾಗಿ ಹುಟ್ಟಿದ ಮೇಲೆ ಜಾತಿ ಹೇಳಿಕೊಳ್ಳಲು ಹಿಂಜರಿಕೆ ಪಡಬಾರದು. ಗರ್ವದಿಂದ ಎದೆತಟ್ಟಿ ಹೇಳಿಕೊಳ್ಳಬೇಕು ಎಂದು ಕಾಗಿನೆಲೆ ಕನಕಗುರುಪೀಠ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾವೆಲ್ಲರೂ ಹಾಲುಮತಸ್ಥರು. ಎಲ್ಲರೂ ಒಂದೆಡೆ ಕೂಡಿಕೊಳ್ಳುತ್ತೇವೆ ಎಂದರೆ ಅಲ್ಲಿ ಒಂದು ಮಿಂಚಿನ ಸಂಚಲನ ನಡೆಯಲಿದೆ ಎಂದರ್ಥ. ಅದಕ್ಕಾಗಿ ಕೆಲವರಿಂದ ಹಾಲಿಗೆ ಹುಳಿ ಹಿಂಡುವ ಕೆಲಸ ನಡೆಯುತ್ತಿರುತ್ತದೆ. ಇದು ಇಂದೂ ಇದೆ, ಹಿಂದೆಯೂ ಇತ್ತು. ಪೂರ್ವಜರು ಹುಳಿ ಹಿಂಡಿದ ಹಾಲು ಹೆಪ್ಪಾಗಿ ಕೆಟ್ಟು ಹೋಯಿತು ಎಂದು ಚೆಲ್ಲಿದರು. ಆದರೆ ಈಗಿನವರು ಅದೇ ಹೆಪ್ಪಿಗೆ ಕಡ್ಡಿ ಆಡಿಸಿ ಮೊಸರಾಗಿಸಿ ಬೆಣ್ಣೆ ಬರುವಂತೆ ಮಾಡಿದರು. ಬಂದ ಬೆಣ್ಣೆಯನ್ನು ತುಪ್ಪವಾಗಿಸಿಕೊಂಡು ಬಲಿಷ್ಠ ಸಮಾಜ ನಿರ್ಮಾಣಕ್ಕೆ ಮುಂದಾದರು. ಈ ಸಮಾಜ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ಕೆಟ್ಟ ಸಮಾಜ ಇದ್ದೇ ಇರುತ್ತದೆ ಎಂದರು.
ಕನಕದಾಸರು ಬೇಡುವ ನಾಲಿಗೆಯಲ್ಲಿ ನಿಯತ್ತಿದ್ದರೆ ಕೊಡುವ ಕೈಗಳಿಗೆ ಕೊರತೆ ಇಲ್ಲ ಎಂದಿದ್ದರು. ಅದರಂತೆ ಒಳ್ಳೆಯ ಮನಸ್ಸಿನಿಂದ ಕೇಳಿರುವ ನಿಮಗೆ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ. ಹಾಗಾಗಿ ಭದ್ರಾವತಿಯಲ್ಲಿ ಸಂಘದ ಬೆಳೆವಣಿಗೆಯೊಂದಿಗೆ ಕನಕ ಪತ್ತಿನ ಸಹಕಾರ ಸಂಘವೂ 10 ಕೋಟಿ ರೂ. ಸಂಗ್ರಹಣೆಯೊಂದಿಗೆ ಉತ್ತಮವಾಗಿ ಬೆಳೆಯುತ್ತಿದೆ. ಜೀವನದಲ್ಲಿ ಸಮರ್ಥನೆ ಮಾಡಿಕೊಂಡು ಬದುಕುವುದನ್ನು ಕಲಿಯಬೇಕು. ಆಗ ಮಾತ್ರ ಒಳಿತನ್ನು ಕಾಣಲು ಸಾಧ್ಯ ಎಂದರು.
ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಕುರುಬ ಸಮುದಾಯದ ಅಧಿಕಾರಿಗಳು ಯಾರೇ ಆಗಿದ್ದರೂ ಕರ್ತವ್ಯದಲ್ಲಿ ಕುಳಿತಾಗ ಜಾತಿ ಮಾಡಬೇಡಿ. ಕರ್ತವ್ಯ ನಿಷ್ಠೆ ತೋರಿಸಿ. ಹಾಲುಮತಸ್ಥರು ಹಾಲಿನಷ್ಟೆ ಪರಿಶುದ್ದರು ಎಂದು ಕರೆಸಿಕೊಂಡಿದ್ದೇವೆ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಬಿ.ಎಂ.ಸಂತೋಷ್ ಮಾತನಾಡಿ, ಸಮಾಜದ ಪ್ರತಿಯೊಬ್ಬರ ಸಹಕಾರದಿಂದ ಸಂಘವು ಲಾಭದತ್ತ ಸಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲೆಗಳನ್ನು ತೆರೆಯಲಾಗುವುದು. ಜಂಕ್ಷನ್ ಭಾಗದಲ್ಲಿ ರೆಸಿಡೆನ್ಸಿ ಶಾಲೆ, ಬಿ.ಆರ್.ಪಿಯಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಸೇರಿದಂತೆ ಈಗಾಗಲೆ ನಗರದ ಮುಖ್ಯ ಭಾಗದಲ್ಲಿ 1.34 ಗುಂಟೆ ಜಾಗ ಖರೀದಿಸಲಾಗಿದೆ ಎಂದು ಹೇಳಿದರು.
ನಿವೃತ್ತ ಐಎಸ್‌ಐ ಅಧಿಕಾರಿ ಬಿ.ಎಸ್.ಶೇಖರಪ್ಪ ಮಾತನಾಡಿ, ಸಮಾಜ ಮುಂದುವರಿಯಬೇಕಾದಲ್ಲಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಪ್ರತಿ ಪಾಲಕರು ಮಾಡಬೇಕು ಎಂದರು.
ದಾವಣಗೆರೆ ಪ್ರೊಬೇಷನರಿ ತಹಸೀಲ್ದಾರ್ ಟಿ.ಎನ್.ರಘು, ಕರ್ನಾಟಕ ಪ್ರದೇಶ ಕುರುಬರ ಸಂಘ ಉಪಾಧ್ಯಕ್ಷ ಕೆ.ರಂಗನಾಥ್, ನಿರ್ದೇಶಕ ಎಂ.ಶರತ್, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪ್ರಭಾಕರ ಬೀರಯ್ಯ, ಡಾ. ಸೌಮ್ಯಾ ಪ್ರಶಾಂತ್, ಹೇಮಾವತಿ ಶಿವಾನಂದ, ಬಿ.ಎಚ್.ವಸಂತ್, ಸಣ್ಣಯ್ಯ, ವಿನೋದ್‌ಕುಮಾರ್, ನಾಗರಾಜ್ ಸೇರಿದಂತೆ ಹಲವರಿದ್ದರು.