ಲೋಡ್‌ಶೆಡ್ಡಿಂಗ್‌ಗೆ ಅನ್ನದಾತರ ತತ್ತರ

JLR Protest 2
Published on

ಚಿತ್ರದುರ್ಗ: ಮಳೆ ಕೊರತೆಯಿಂದ ಉಂಟಾಗಿರುವ ಬರ ಎದುರಿಸುವ ಸವಾಲಿನ ಜತೆಗೆ ವಿದ್ಯುತ್ ಕ್ಷಾಮ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ರೈತ ಸಮೂಹಕವನ್ನು ಕಂಗಾಲಾಗಿಸಿದೆ.

ಬೋರ್‌ವೆಲ್‌ಗಳಿಂದ ನೀರುಣಿಸಿ ಬೆಳೆಗಳನ್ನು ಬದುಕಿಸಿ ಕೊಳ್ಳುವ ಕೃಷಿಕರ ಪ್ರಯತ್ನಕ್ಕೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆತಂಕ ತಂದೊಡ್ಡಿದೆ. ಶೇಂಗಾ, ಈರುಳ್ಳಿ, ಜೋಳ, ರಾಗಿ, ತೆಂಗು, ಅಡಕೆ ಬೆಳೆಗಾರರು ಭವಿಷ್ಯದ ಬಗ್ಗೆ ಚಿಂತಾ ಕ್ರಾಂತರಾಗಿದ್ದಾರೆ.

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಈಗಾಗಲೇ ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ಸೇರಿ ವಿವಿಧ ತಾಲೂಕುಗಳ ರೈತರು ಬೀದಿಗಿಳಿದಿದ್ದಾರೆ. ನಮಗೆ ಯಾವ ಗ್ಯಾರಂಟಿನೂ ಬೇಡ. ಕನಿಷ್ಠ 7 ಗಂಟೆ 3 ಫೇಸ್ ವಿದ್ಯುತ್ ಕೊಡಿ ಎಂಬ ಬೇಡಿಕೆ ಮುಂದಿಟ್ಟಿದಾರೆ.

ವಿದ್ಯುತ್ ಕೊರತೆಯನ್ನು ಮೊದಲೇ ಊಹಿಸಿ ನೆರೆಯ ರಾಜ್ಯಗಳಿಂದ ಖರೀದಿಸುವ ಯೋಚನೆ ಮಾಡಬೇಕಿತ್ತು ಎನ್ನುತ್ತಾರೆ ರೈತರು. ಈ ಕುರಿತು ವಿಜಯವಾಣಿ ಎದುರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ರೈತಕುಲ ನಾಶಕ್ಕೆ ಯತ್ನ: ಜಿಲ್ಲೆಯಲ್ಲಿ ಬರ ಭೀಕರವಾಗಿದೆ. ಕೊಳವೆ ಬಾವಿ ಆಶ್ರಯಿತ ಬೆಳೆ ಉಳಿಸಿಕೊಳ್ಳಲು ಲೋಡ್ ಶೆಡ್ಡಿಂಗ್ ಅಡ್ಡಿಯಾಗಿದೆ. ವಿದ್ಯುತ್ ಕಡಿತದ ಮೂಲಕ ರೈತಕುಲದ ನಾಶಕ್ಕೆ ಸರ್ಕಾರವೇ ಮುನ್ನುಡಿ ಬರೆಯುವ ರೀತಿ ಕಾಣುತ್ತಿದೆ. ಕಳೆದ 40 ದಿನಗಳಿಂದ 7 ಗಂಟೆ ಬದಲು 2-3 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಬೆಳೆ ನಾಶವಾಗುತ್ತಿದೆ. ಅಳಿದುಳಿದ ಬೆಳೆ ನಸಿ ರೋಗಕ್ಕೆ ತುತ್ತಾಗುತ್ತಿದೆ. ರೈತರು ಚಕ್ರವ್ಯೆಹದೊಳಗೆ ಸಿಲುಕಿದ್ದಾರೆ. ರಕ್ಷಣೆಗೆ ಬರಬೇಕಾದ ಸರ್ಕಾರ ಕೈಕಟ್ಟಿ ಕೂತಿದೆ.-ಈಚಘಟ್ಟದ ಸಿದ್ದವೀರಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತಸಂಘ, ಹೊಳಲ್ಕೆರೆ

ವಿದ್ಯುತ್ ಗ್ಯಾರಂಟಿ ಬೇಕು: ಲಕ್ಷಾಂತರ ರೈತರು ಬೆಳೆ ಸಾಲ ಮಾಡಿ ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರ ನಿತ್ಯ 5 ಗಂಟೆ ವಿದ್ಯುತ್ ಪೂರೈಸುವ ಭರವಸೆ ನೀಡಿದೆಯಾದರೂ ಬೆಸ್ಕಾಂ ಅಧಿಕಾರಿಗಳು ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ. ನಮಗೆ ಯಾವುದೇ ಗ್ಯಾರಂಟಿ ಬೇಡ. ವಿದ್ಯುತ್ ಗ್ಯಾರಂಟಿ ಕೊಟ್ಟರೆ ಸಾಕು. ರಾತ್ರಿ ವೇಳೆ ವಿದ್ಯುತ್ ನೀಡಿದರೂ ಪ್ರಾಣ ಭಯ ಬಿಟ್ಟು ಬೆಳೆಗೆ ನೀರು ಕಟ್ಟಲು ರೈತರು ಸಿದ್ಧರಿದ್ದಾರೆ.- ಧನಂಜಯ ಹಂಪಯ್ಯನಮಾಳಿಗೆ, ತಾಲೂಕಾಧ್ಯಕ್ಷ, ರೈತಸಂಘ, ಚಿತ್ರದುರ್ಗ

ನಷ್ಟದ ಸಂಪೂರ್ಣ ಹಣ ನೀಡಲಿ: ಬರಗಾಲ ಎದುರಿಸುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರೈತರ ನೆರವಿಗೆ ಧಾವಿಸುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ತೋಟಗಾರಿಕೆ ಬೆಳೆಗಳು ನಾಶವಾಗುತ್ತಿವೆ. ಕೃಷಿಗೆ ಖರ್ಚು ಮಾಡಿದ ಸಂಪೂರ್ಣ ಹಣವನ್ನು ಪರಿಹಾರವಾಗಿ ಭರಿಸಬೇಕು.-ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಹಸಿರುಸೇನೆ ಜಿಲ್ಲಾಧ್ಯಕ್ಷ, ಚಿತ್ರದುರ್ಗ

ಕಗತ್ತಲಲ್ಲಿ ಕರ್ನಾಟಕ: ಬರದ ಹೆಸರಿನಲ್ಲಿ ಕರ್ನಾಟಕವನ್ನು ಕಗತ್ತಲಿಗೆ ದೂಡಲಾಗುತ್ತಿದೆ. ದೊಡ್ಡ ಕೈಗಾರಿಕೆ, ದೊಡ್ಡ ನಗರ, ಪಟ್ಟಣಗಳಲ್ಲಿ ವಿದ್ಯುತ್‌ಗೆ ಸಮಸ್ಯೆ ಇಲ್ಲ. ಆದರೆ, ದೇಶಕ್ಕೆ ಅನ್ನ ನೀಡುವ ಕೃಷಿಕರಿಗೆ ಕರೆಂಟ್ ನೀಡಲು ಸರ್ಕಾರಕ್ಕೆ ಆಗುತ್ತಿಲ್ಲ. ಬಡ, ಮಧ್ಯಮ ವರ್ಗದ ರೈತರಿಗೆ ಘೋರ ಶಿಕ್ಷೆ ಆಗಿದೆ. ಬೆಳೆ ನಷ್ಟವಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೂ ಕುತ್ತು ಬಂದಿದೆ.-ಬೇಡರಡ್ಡಿಹಳ್ಳಿ ಬಸವರಡ್ಡಿ, ಉಪಾಧ್ಯಕ್ಷ, ರಾಜ್ಯ ರೈತಸಂಘ, ಮೊಳಕಾಲ್ಮೂರು

ರೈತರು ಬೀದಿಪಾಲು: ಲೋಡ್‌ಶೆಡ್ಡಿಂಗ್ ಜಾರಿಗೊಳಿಸುವ ಮೂಲಕ ಸರ್ಕಾರ ರೈತರನ್ನು ಬೀದಿಪಾಲು ಮಾಡುವ ಕೆಲಸಕ್ಕೆ ಮುಂದಾಗಿದೆ. ಈಗಾಗಲೇ ಅಗತ್ಯ ವಸ್ತುಗಳು, ಕೃಷಿ ಪರಿಕರಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಕೃಷಿಕರು, ವಿದ್ಯುತ್ ವ್ಯತ್ಯಯದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಯೋಜನೆ ರೂಪಿಸಬೇಕು.- ಮರ‌್ಲಹಳ್ಳಿ ರವಿಕುಮಾರ, ತಾಲೂಕಾಧ್ಯಕ್ಷ, ರೈತಸಂಘ, ಮೊಳಕಾಲ್ಮೂರು

ಕೆಇಬಿ ಕಚೇರಿಗೆ 16ಕ್ಕೆ ಮುತ್ತಿಗೆ: ಮಳೆ ಕೊರತೆಯಿಂದ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ, ಈರುಳ್ಳಿ, ಮೆಕ್ಕೆಜೋಳ ಬೆಳೆಗಳು ಒಣಗಿವೆ. ಅಳಿದುಳಿದ ಪೈರು ಉಳಿಸಿಕೊಳ್ಳಲು ಪದೆ ಪದೇ ವಿದ್ಯುತ್ ಕಡಿತದಿಂದ ಸಮಸ್ಯೆ ಆಗಿದೆ. 7 ಗಂಟೆ ಬದಲು ರಾತ್ರಿ 2, ಹಗಲು 2 ಗಂಟೆ ವಿದ್ಯುತ್ ನೀಡಲಾಗುತ್ತಿದೆ.ಈ ನೀತಿ ಖಂಡಿಸಿ ಅ.16ರಂದು ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು.-ಕೆ.ಪಿ.ಭೂತಯ್ಯ, ಉಪಾಧ್ಯಕ್ಷ, ರಾಜ್ಯ ರೈತಸಂಘ, ಚಳ್ಳಕೆರೆ

ಪರಿಸರ ಸಮತೋಲನವೇ ಸೂಕ್ತ ಮದ್ದು: ಪ್ರಕೃತಿ ಸಿಟ್ಟಿನ ಮುಂದೆ ನಾವೆಲ್ಲ ಗೌಣ. ಮಳೆ ಸುರಿಯದಿದ್ದರೆ ಬೆಳೆ, ವಿದ್ಯುತ್, ನೀರು, ಮೇವು ಸಮಸ್ಯೆ ಉದ್ಬವವಾಗಲಿದೆ. ಇದಕ್ಕೆ ಮೂಲ ಕಾರಣ ಕಾಡು ನಾಶ. ನಾವು ಮೊದಲು ನಮ್ಮ ಜಮೀನು, ರಸ್ತೆ ಬದಿ, ಶಾಲಾ-ಕಾಲೇಜು, ಗೋಮಾಳದಲ್ಲಿ ಸಸಿ ನೆಟ್ಟು ಪೋಷಿಸಬೇಕು. ಕಾಡು ಉಳಿಸಿ, ಬೆಳೆಸುವ ಕೆಲಸಕ್ಕೆ ಮುಂದಾಗಬೇಕು. ಸರ್ಕಾರ ಕೂಡ ಶಾಶ್ವತ ಯೋಜನೆ ರೂಪಿಸಿಸಬೇಕು.-ಆರ್.ನಿಂಗನಾಯ್ಕ, ಗ್ರಾಮಸ್ಥ, ಬೇವಿನಹಳ್ಳಿ

ಮಾತು ಮರೆತ ನಾಯಕರು: ಮಳೆ ಕೊರತೆ-ಭೀಕರ ಬರದಿಂದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ರೈತರ ನೆರವಿಗೆ ದಾವಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಕೃಷಿಗೆ 7 ಗಂಟೆ ನಿರಂತರ ವಿದ್ಯುತ್ ಪೂರೈಸುವುದಾಗಿ ಕಾಂಗ್ರೆಸ್ ನಾಯಕರು ಭವರಸೆ ನೀಡಿದ್ದರು. ಪ್ರಸ್ತುತ ಅಧಿಕಾರ ಸಿಕ್ಕ ಮೇಲೆ ರಾಜಕಾರಣಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆ.-ರಂಗನಾಥ್, ಪ್ರಗತಿಪರ ರೈತ, ಅರಳಿಕೆರೆ

ಗಾಯದ ಮೇಲೆ ಬರೆ: ಬರದಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ವಿದ್ಯುತ್ ಕಡಿತ ಮಾಡಿರುವ ಸರ್ಕಾರ ರೈತರ ಹಿತ ರಕ್ಷಿಸಲು ವಿಫಲವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ, ಅಡಕೆ, ಪಪ್ಪಾಯ, ದಾಳಿಂಬೆ ಇತರ ತೋಟಗಾರಿಕೆ ಕೃಷಿ ಮಾಡಿರುವ ರೈತರಿಗೆ ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ, ಕೇಂದ್ರ-ರಾಜ್ಯ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕು.-ಜಿ.ಕಲ್ಪನಾ, ರೈತ ಮಹಿಳೆ, ಹಿರಿಯೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net