

ಶಿವಮೊಗ್ಗ: ತಾಯಿ ಹಾಲು ಮಗುವಿಗೆ ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ಹಾಲಿನ ಮಹತ್ವ ಮತ್ತು ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಅನುಕೂಲದ ಕುರಿತು ಎಲ್ಲರೂ ತಿಳಿಯಬೇಕಿದೆ ಎಂದು ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದರು.
ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ತನಪಾನದ ಮಹತ್ವ ಮತ್ತು ಅದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಅನುಕೂಲಗಳು ಆಗಲಿವೆ. ಜತೆಗೆ ಮಗುವಿನ ಬೆಳವಣಿಗೆಯಲ್ಲಿ ಹಾಲು ಮಹತ್ವದ ಪಾತ್ರ ವಹಿಸಲಿದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ಧನಗೌಡ ಪಾಟೀಲ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ತಾಯಿಯ ಹಾಲಿಗೆ ಸರಿಸಮವಾದ ವಸ್ತು ಯಾವುದೂ ಇಲ್ಲ. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ತಾಯಿಯ ಹಾಲುಂಡ ಮಗು ಆರೋಗ್ಯವಾಗಿರುತ್ತದೆ ಮತ್ತು ಮಾನಸಿಕವಾಗಿ ಸದೃಢವಾಗಿರುತ್ತದೆ. ಆದ್ದರಿಂದ ತಾಯಂದಿರು ಮಗುವಿಗೆ ಯಾವುದೇ ಉದಾಸೀನ ಮಾಡದೇ ದಿನಕ್ಕೆ 8 ಬಾರಿ ಹಾಲುಣಿಸಿ ಬೆಳೆಸುವ ಮೂಲಕ ದೇಶದ ಸದೃಢ ಪ್ರಜೆಯನ್ನಾಗಿ ಮಾಡಬೇಕು ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಸಂಭವಿಸುವ ಮಕ್ಕಳ ಮರಣಕ್ಕೆ ಸಂಬಂಧಿಸಿದ ಕಾರಣಗಳಲ್ಲಿ ಸರಿಯಾದ ಕ್ರಮದಲ್ಲಿ ಮಗುವಿಗೆ ಹಾಲು ನೀಡದಿರುವುದು, ಹಾಲುಣಿಸುವಾಗ ಮತ್ತು ನಂತರದಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ವಹಿಸದಿರುವುದು ಕೂಡ ಒಂದಾಗಿದೆ ಎಂದು ಹೇಳಿದರು.
ಹೊಂದಾಣಿಕೆ ಮತ್ತು ಪರಿಣಾಮಕಾರಿಯಾಗಿ ಮಗು ಹಾಲು ಸೇವಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹಾಲು ನಿಸರ್ಗದ ಅಮೃತವಿದ್ದಂತೆ. ಯಾವುದೇ ಖರ್ಚಿಲ್ಲದೆ, ಪರಿಶುದ್ಧವಾದ ಮತ್ತು ಮಗುವಿಗೆ ಕಾಲಕ್ಕೆ ಅನುಗುಣವಾಗಿ ಬೇಕಾದ ಉಷ್ಣಾಂಶ, ತಾಜಾತನ ಮತ್ತು ಮಾರಕ ರೋಗಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ನೀಡುವ ಏಕೈಕ ವಸ್ತುವೆಂದರೆ ಅದು ತಾಯಿಯ ಹಾಲು ಮಾತ್ರ. ಹಾಗಾಗಿ ಎಲ್ಲ ತಾಯಂದಿರು ಸರಿಯಾದ ಕ್ರಮದಲ್ಲಿ ಹಾಲುಣಿಸಬೇಕೆಂದು ಸಲಹೆ ನೀಡಿದರು.
ಮೆಗ್ಗಾನ್ ಆಸ್ಪತ್ರೆ ಮಕ್ಕಳ ತಜ್ಞೆ ಡಾ. ಸುನೀತಾ, ಮೆಗ್ಗಾನ್ ವೈದ್ಯಕೀಯ ಅಧಿಕ್ಷಕ ಡಾ. ತಿಮ್ಮಪ್ಪ ಮಾತನಾಡಿದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಬಿ.ಪಾಟೀಲ್, ಒಬಿಜಿ ವಿಭಾಗದ ಮುಖ್ಯಸ್ಥ ಡಾ. ಲೇಪಾಕ್ಷಿ, ಮಕ್ಕಳ ತಜ್ಞ ಡಾ. ಮನೋಜ್, ಐಎಪಿ ಅಧ್ಯಕ್ಷ ಡಾ. ವೀರೇಶ್, ಐಎಪಿಯ ಡಾ. ವಿನಾಯಕ್, ಒಬಿಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚಂದ್ರಶೇಖರ್, ನವಜಾತ ಶಿಶು ತಜ್ಞ ಡಾ. ವೇಣುಗೋಪಾಲ್, ನರ್ಸಿಂಗ್ ಅಧೀಕ್ಷಕಿ ಅನ್ನಪೂರ್ಣಾ, ಶುಶ್ರೂಷಾಧಿಕಾರಿ ಜಯಲಕ್ಷ್ಮೀ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿ ಹಾಜರಿದ್ದರು.