

ಚಿತ್ರದುರ್ಗ: ವಿಶ್ವಾದ್ಯಂತ ಕುರಿಗಾಹಿಗಳನ್ನು ಸಂಘಟಿಸಲು ಒಕ್ಕೂಟ ರಚಿಸಲಾಗುತ್ತಿದೆ. ಅದಕ್ಕಾಗಿ ಬೆಳಗಾವಿಯಲ್ಲಿ ಅ.2 ಮತ್ತು 3ರಂದು ಅಖಿಲ ಭಾರತ ಕುರುಬರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್‌ನ ರಾಜ್ಯ ಕಾರ್ಯದರ್ಶಿ ಜಿ.ಎಸ್.ಕುಮಾರ್‌ಗೌಡ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಇದೇ ವೇಳೆ ಅವರನ್ನು ಸನ್ಮಾನಿಸಲಾಗುವುದು. ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದು, ನಾಲ್ಕೈದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ದೇಶದಲ್ಲಿರುವ ಕುರುಬರನ್ನು ಸಂಘಟಿಸುವ ಕಾರ್ಯ 2009ರಲ್ಲಿ ಸಂಸ್ಥಾಪನಾ ಅಧ್ಯಕ್ಷ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಆರಂಭವಾಯಿತು. ಹಂತ-ಹಂತವಾಗಿ ವ್ಯಾಪ್ತಿ ವಿಸ್ತರಿಸುತ್ತಿದೆ. ಇದಕ್ಕಾಗಿ ದೇಶ-ವಿದೇಶಗಳಲ್ಲಿ ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
2025ರಲ್ಲಿ ವಿಶ್ವದ ಶೆಫರ್ಡ್ಸ್ ಬೃಹತ್ ಸಮಾವೇಶ ಕೆನಾಡದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ರಾಜಕೀಯ ನೇತಾರರು, ಅಧಿಕಾರಿಗಳು, ವರ್ತಕರು ಒಳಗೊಂಡು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರುವ ಸಂಬಂಧ ಸೆ. 24ರಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗಷ್ಟೇ ಶೆಫರ್ಡ್ಸ್ ಸಭೆ ಕರೆದು ಕುರಿಗಾಹಿಗಳ ಕ್ಷೇಮಾಭಿವೃದ್ಧಿ ಕುರಿತು ಚರ್ಚಿಸಿದ್ದಾರೆ. ಸಮಾಜವನ್ನು ಎಸ್ಟಿಗೂ ಸೇರಿಸುತ್ತಾರೆ ಎಂಬ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಮುಖಂಡರು ಶ್ರಮಿಸಲಿದ್ದಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಮಾಜಿ ಸದಸ್ಯ ಎಲ್.ತಿಪ್ಪೇಸ್ವಾಮಿ, ಮುಖಂಡರಾದ ಗಂಗಾಧರ್, ಗುರು ಇದ್ದರು.